ಸಂಪಾದಕೀಯ | ಅಕ್ರಮ ನೇಮಕಾತಿಗೆ ಪ್ರಹಾರ

ವಿಜಯವಾಣಿ (2)
Published on

ಪಶ್ಚಿಮ ಬಂಗಾಳದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ 25,753 ಶಿಕ್ಷಕರು ಹಾಗೂ ಇತರ ಸಿಬ್ಬಂದಿ ನೇಮಕವನ್ನು ಅಸಿಂಧುಗೊಳಿಸಿ ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ. ಈ ನೇಮಕಾತಿಯನ್ನು ರದ್ದುಗೊಳಿಸಿ ಕಲ್ಕತ್ತ ಹೈಕೋರ್ಟ್ 2024ರ ಏಪ್ರಿಲ್ 22ರಂದು ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಅಕ್ರಮ ನೇಮಕಾತಿಯನ್ನು ಸಮರ್ಥಿಸಿಕೊಳ್ಳುತ್ತಿದ್ದ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಈ ಮೂಲಕ ಭಾರಿ ಮುಖಭಂಗವಾಗಿದೆ.

‘ಇಡೀ ನೇಮಕಾತಿ ಪ್ರಕ್ರಿಯೆಯೇ ದೋಷಪೂರ್ಣವಾಗಿದೆ. ಭಾರಿ ಪ್ರಮಾಣದಲ್ಲಿ ಅಕ್ರಮಗಳು ನಡೆದಿವೆ. ಜೊತೆಗೆ, ಈ ಅಕ್ರಮಗಳನ್ನು ಮುಚ್ಚಿಹಾಕಲು ನಡೆಸಿದ ಪ್ರಯತ್ನಗಳಿಂದಾಗಿ ಇಡೀ ನೇಮಕಾತಿ ಪ್ರಕ್ರಿಯೆ ದುರಸ್ತಿ ಮಾಡಲಾಗದಂತಹ ಸ್ಥಿತಿ ತಲುಪಿದೆ. ಆದ್ದರಿಂದ ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಮತ್ತು ಈ ಪ್ರಕ್ರಿಯೆಯನ್ನು ಮೂರು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು’ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನೇತೃತ್ವದ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿ ಸಂಜಯಕುಮಾರ್ ಇದ್ದ ಪೀಠವು ಆದೇಶಿಸಿದೆ. ಮಾನವೀಯತೆ ದೃಷ್ಟಿಯಿಂದ ಕೆಲ ಅಂಗವಿಕಲ ನೌಕರರಿಗೆ ವಿನಾಯಿತಿ ನೀಡಿರುವ ನ್ಯಾಯಪೀಠ, ಇಂಥವರು ಉದ್ಯೋಗದಲ್ಲಿ ಮುಂದುವರಿಯಬಹುದು ಎಂದಿದೆ.

ಸುಪ್ರೀಂ ಕೋರ್ಟ್​ನ ಈ ತೀರ್ಪು ಎಲ್ಲ ರಾಜ್ಯಗಳಿಗೂ ಮಹತ್ವದ ಪಾಠವೆಂದೇ ಹೇಳಬಹುದು. ಏಕೆಂದರೆ, ಇಂಥ ಪ್ರಕರಣಗಳು ಪಶ್ಚಿಮ ಬಂಗಾಳಕ್ಕೆ ಸೀಮಿತವಲ್ಲ. ಇತ್ತೀಚಿನ ವರ್ಷಗಳಲ್ಲಿ ಬಹುತೇಕ ರಾಜ್ಯಗಳಲ್ಲಿ ಸರ್ಕಾರಿ ನೇಮಕಾತಿಗಳು ಅವ್ಯವಹಾರ, ಅಕ್ರಮದಿಂದ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿವೆ ಮತ್ತು ಇದರಿಂದ ನ್ಯಾಯಯುತವಾಗಿ ಪರೀಕ್ಷೆ ಬರೆದು, ಆಯ್ಕೆಯಾದ ಅಭ್ಯರ್ಥಿಗಳು ಸಂಕಷ್ಟಕೊಳಗಾಗಿದ್ದಾರೆ. ನೇಮಕಾತಿ ಪರೀಕ್ಷೆಯಲ್ಲಿ ಅವ್ಯವಹಾರ, ಅಕ್ರಮ ಅಲ್ಲದೆ ಲಂಚದ ಹಾವಳಿಯ ನಿದರ್ಶನಗಳು ಹೆಚ್ಚುತ್ತಲೇ ಇವೆ. ಪಶ್ಚಿಮ ಬಂಗಾಳ ಸಿಬ್ಬಂದಿ ನೇಮಕಾತಿ ಆಯೋಗ 2016ರಲ್ಲಿ ನೇಮಕಾತಿ ನಡೆಸಿತ್ತು. 24,640 ಹುದ್ದೆಗಳಿಗಾಗಿ 23 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಈ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಹಾಗೂ ಇಬ್ಬರು ಟಿಎಂಸಿ ಶಾಸಕರ ವಿರುದ್ಧ ತನಿಖೆ ನಡೆಯುತ್ತಿದೆ. ಆದರೂ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ‘ಸುಪ್ರೀಂ ಕೋರ್ಟ್ ತೀರ್ಪನ್ನು ಒಪ್ಪಲಾಗುವುದಿಲ್ಲ’ ಎಂದು ಹೇಳಿರುವುದು ಧಾರ್ಷ್ಟ್ಯದ ಪರಮಾವಧಿಯೇ ಹೌದು.

ಭ್ರಷ್ಟಾಚಾರರಹಿತ ಆಡಳಿತ ನಡೆಸುವುದು ಆಡಳಿತದಲ್ಲಿ ಇರುವವರ ಪ್ರಧಾನ ಕರ್ತವ್ಯ. ಆದರೆ, ಅಕ್ರಮ, ಅವ್ಯವಹಾರ ವ್ಯಾಪಕ ಪ್ರಮಾಣದಲ್ಲಿ ನಡೆದಿದೆಯೆಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದ್ದರೂ, ಅದನ್ನೊಪ್ಪದ ಮಮತಾ ಈ ದೇಶದ ಕಾನೂನನ್ನೇ ಉಲ್ಲಂಘಿಸಿ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಇಂಥವರ ವಿರುದ್ಧ ನ್ಯಾಯಾಂಗ ನಿಂದನೆಯಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಸುಪ್ರೀಂ ಕೋರ್ಟಿನ ಈ ಮಹತ್ವದ ತೀಪಿನಿಂದ ಎಲ್ಲ ರಾಜ್ಯಗಳು ಎಚ್ಚೆತ್ತುಕೊಂಡು ನೇಮಕಾತಿಗೆ ಪಾರದರ್ಶಕ ಹಾಗೂ ಪರಿಣಾಮಕಾರಿ ವ್ಯವಸ್ಥೆಯನ್ನು ರೂಪಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net