

Preeti Kushwaha: ಪ್ರೀತಿ ಎಂದರೆ ಹಾಗೆಯೇ. ಯಾರೊಂದಿಗೆ ಯಾವ ಕಾರಣಕ್ಕೆ ಮನಸಿನಲ್ಲಿ ಪ್ರೀತಿಯೆಂಬ ಹೂವು ಅರಳುತ್ತದೆ ಎಂಬುದು ತಿಳಿಯುವುದಿಲ್ಲ. ಕೆಲವೊಂದು ಹೂವು ಅರಳಿ ಘಮಿಸಿದರೆ, ಇನ್ನೂ ಕೆಲವು ಹೂವುಗಳು ಅರಳುವ ಮುನ್ನವೇ ಬಾಡಿ ಹೋಗುತ್ತವೆ. ಈಕೆಯ ಬಾಳಿನಲ್ಲೂ ಅದೇ ಆಗಿದೆ. ಸೋದರಸಂಬಂಧಿ ಜತೆಗೆ ಪ್ರೇಮ ಸಂಬಂಧ ಹೊಂದಿದ್ದ ಈ ಯುವತಿ, ತನಗೆ ಉಂಟಾದ ಪರಿಸ್ಥಿತಿಗಳನ್ನು ತಾಳಲಾರದೆ ಬದುಕುವುದೇ ಬೇಡ ಎಂದು ನಿರ್ಧರಿಸಿ, ಕೊನೆಗೆ ಸಾವಿನಲ್ಲಿ ದುರಂತ ಅಂತ್ಯ ಕಂಡಿದ್ದಾಳೆ.
ಮನೆಯ ಕಿರಿಯ ಮಗಳು ಪ್ರೀತಿ ವಿಷಯದಿಂದ ಸೊರಗಿ, ಕಣ್ಣು, ತಲೆ, ಮನಸಿನ ತುಂಬ ದುಃಖವನ್ನೇ ತುಂಬಿಕೊಂಡಿದ್ದಳು. ಇದನ್ನು ತಾಳಲಾರದೆ ಕೊನೆಯ ಕ್ಷಣದಲ್ಲಿ ತಮಗೆ ಕರೆ ಮಾಡಿ, ಸಾವಿಗೀಡಾಗಿದ್ದಾಳೆ ಎಂದು ಹೆತ್ತವರು ಕಣ್ಣೀರಾಕಿದ್ದಾರೆ. ಮನೆಯಲ್ಲಿ ಆಕೆಯ ಅಣ್ಣ, ತಂಗಿ ಮತ್ತು ನಾವು ಹೊರಗೆ ಹೋದ ಸಮಯ ನೋಡಿಕೊಂಡು, ಮನೆಯ ಕೋಣೆಯಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ. ನಾವೆಲ್ಲರೂ ಮನೆಗೆ ಹಿಂತಿರುಗಿ ಬರುವ ಕೆಲ ಸಮಯಕ್ಕೂ ಮೊದಲು ಅವಳು ಫೋನ್ ಮಾಡಿ, ನಮಗಾಗಿ ಚಪ್ಪಾತಿ ಮಾಡಿರುವುದಾಗಿ ತಿಳಿಸಿದ್ದಳು. ಆದ್ರೆ, ಮನೆಗೆ ಬಂದು ನೋಡುವುದರಳೊಗೆ ಈ ದುರಂತ ಸಂಭವಿಸಿತ್ತು ಎಂದು ತಾಯಿ ಅಳಲು ತೋಡಿಕೊಂಡಿದ್ದಾರೆ.
ದೆಹಲಿ ಮೂಲದ ಮೃತ ಯುವತಿ ಪ್ರೀತಿ ಕುಶ್ವಾಹ ಕುಟುಂಬವು ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಮಗಳ ಸಾವಿಗೆ ಕಾರಣ ಆಕೆ ಗುಟ್ಟಾಗಿ ನಡೆಸಿಕೊಂಡು ಬಂದಿದ್ದ ಪ್ರೀತಿ ಸಂಬಂಧ ಎಂದು ಆರೋಪಿಸಿದ್ದಾರೆ. ತಮ್ಮ ಕುಟುಂಬದ ದೂರದ ಸೋದರಸಂಬಂಧಿಯೇ ಆರೋಪಿ ಎಂದು ದೂರಿದ್ದಾರೆ.
18 ವರ್ಷದ ಪ್ರೀತಿ ಕುಶ್ವಾಹ, ದೆಹಲಿ ಮೂಲದ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಎರಡು ವರ್ಷಗಳ ಹಿಂದೆ, ಕುಶ್ವಾಹ ಮನೆಯವರು ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತಮ್ಮ ಊರಿಗೆ ಹೋಗಿದ್ದರು. ಈ ವೇಳೆ ಪ್ರೀತಿ ತಮ್ಮದೇ ಕುಟುಂಬದ ದೂರದ ಸೋದರಸಂಬಂಧಿಯನ್ನು ನೋಡಿ, ಪರಸ್ಪರ ಆತ್ಮೀಯತೆಯನ್ನು ಹಂಚಿಕೊಂಡಿದ್ದರು. ದಿನಗಳು ಉರುಳಿದಂತೆ ಇಬ್ಬರ ನಡುವಿನ ಗೌಪ್ಯ ಪ್ರೇಮ ಸಂಬಂಧ ಹೆಮ್ಮರವಾಗಿ ಬೆಳೆಯಿತು. ಕಡೆಗೆ ಇದೇ ಆಕೆಯ ಸಾವಿಗೆ ಕಾರಣವಾಯಿತು.
ಆತನ ಫೋನ್ ನಂಬರ್ ಅನ್ನು 'ಮಿಸ್ಟರ್ ಪತಿ' ಎಂದು ಸೇವ್ ಮಾಡಿಕೊಂಡಿದ್ದ ಪ್ರೀತಿ, ಸಾಕಷ್ಟು ಸಂದೇಶಗಳು ಮತ್ತು ಕರೆಯನ್ನು ಮಾಡಿದ್ದಾಳೆ. ಆಗಾಗ್ಗೆ ಮುಖಾಮುಖಿ ಭೇಟಿಯಾಗಿ ತಮ್ಮಿಬ್ಬರ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದ ಆಪಾದಿತ ಪ್ರೇಮಿ, ಪ್ರೀತಿ ಹಣೆಗೆ ಸಿಂಧೂರವನ್ನು ಇಡುತ್ತಿರುವ ಫೋಟೋ ಆಕೆ ಸಾವಿನ ನಂತರ ಬಟಾಬಯಲಾಗಿದೆ. ಇದು ಅವರಿಬ್ಬರ ನಡುವೆ ಗುಟ್ಟಾಗಿ ಮದುವೆ ಕೂಡ ನಡೆದಿತ್ತು ಎಂಬುದನ್ನು ಸೂಚಿಸಿವೆ.
ಪ್ರೀತಿ ಜತೆಗಿನ ಸಂಬಂಧವನ್ನು ಕಡಿದುಕೊಂಡ ಕಿರಾತಕ, ಆಕೆಯ ನಂಬರ್ ಬ್ಲಾಕ್ ಮಾಡಿದ್ದಾನೆ. ಇದರಿಂದಾಗಿ ತೀವ್ರ ಖಿನ್ನತೆಗೆ ಒಳಗಾದ ಪ್ರೀತಿ, ಜಾಲತಾಣದ ಪೋಸ್ಟ್‌ಗಳಲ್ಲಿ ತನ್ನ ಬೇಸರದ ಹಿಂದಿರುವ ಕಾರಣವನ್ನು ಬರಹದಲ್ಲಿ ಹಂಚಿಕೊಂಡಿದ್ದಳು. ಮಾರ್ಚ್ 13ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದ ವೀಡಿಯೊದಲ್ಲಿ, "ಅವನು ನನಗೆ ಸಂದೇಶ ಕಳುಹಿಸದಿದ್ದರೆ ಏನು ಕಥೆ? ಅವನು ನನ್ನನ್ನು ನೆನಪಿಸಿಕೊಳ್ಳಬೇಕು" ಎಂದು ಪ್ರೀತಿ ಹೇಳಿಕೊಂಡಿದ್ದಳು.
ಪ್ರಿಯಕರನ ಮಾತು-ಕಥೆ ಇಲ್ಲದೆ ಕಂಗಾಲಾಗಿದ್ದ ಪ್ರೀತಿ, ಸಾಯುವ ಮೊದಲು ಪಿಜ್ಜಾ ಮತ್ತು ಕೂಲ್ ಡ್ರಿಂಕ್ ಆರ್ಡರ್ ಮಾಡಿ, ಆ ನಂತರ ನೇಣಿಗೆ ಶರಣಾಗಿರುವುದಾಗಿ ವರದಿಯಾಗಿದೆ. ಪ್ರೀತಿ ಆತ್ಮಹತ್ಯೆಗೆ ತುತ್ತಾಗಿ 10 ದಿನಗಳೇ ಕಳೆದಿದ್ದರೂ ಅಪಾಧಿತ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ,(ಏಜೆನ್ಸೀಸ್).