

ರಾಯ್ಪುರ: ಚಿನ್ನ, ಬೆಳ್ಳಿ, ಹಣವನ್ನೆಲ್ಲ ಕಳ್ಳತನ ಮಾಡುವುದನ್ನು ನೋಡಿರುತ್ತೀರಿ. ಆದರೆ ಇದೊಂದು ಗ್ರಾಮದಲ್ಲಿ ಹಸುವಿನ ಸಗಣಿಯನ್ನೇ ಕಳ್ಳತನ ಮಾಡಲಾಗಿದೆಯಂತೆ! ಒಂದೇ ರಾತ್ರಿಯಲ್ಲಿ ಬರೋಬ್ಬರಿ 800 ಕೆಜಿ ಸಗಣಿ ಕಳ್ಳತನವಾಗಿದ್ದು, ಈ ಸಂಬಂಧ ಪೊಲೀಸ್ ಪ್ರಕರಣವೂ ದಾಖಲಾಗಿದೆ.
ಚತ್ತೀಸ್ಗಢದ ಡಿಪ್ಕಾ ಪೊಲೀಸ್ ಠಾಣೆ ವ್ಯಾಪ್ತಿಯ ಧುರೇನಾ ಗ್ರಾಮದಲ್ಲಿ ಇಂತಹ ಕಳ್ಳತನವಾಗಿದೆ. ಜೂನ್ 8ರ ರಾತ್ರಿ ಯಾರೋ ಕಳ್ಳರು ಪೂರ್ತಿ ಗ್ರಾಮದ ಎಲ್ಲ ಹಸುಗಳ ಸಗಣಿಯನ್ನು ಕದ್ದಿದ್ದಾರಂತೆ. ಈ ವಿಚಾರವಾಗಿ ಅದೇ ಗ್ರಾಮದ ಸಂಘಟನೆಯೊಂದರ ಮುಖ್ಯಸ್ಥ ಡಿಪ್ಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅನಾಮಧೇಯರ ಮೇಲೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಹುಡುಕಾಟದಲ್ಲಿದ್ದಾರೆ.
ಅಷ್ಟಕ್ಕೂ ಈ ಗ್ರಾಮದಲ್ಲಿ ಸಗಣಿ ಕಳ್ಳತನವಾಗಲು ಒಂದು ಕಾರಣವಿದೆಯಂತೆ. ಚತ್ತೀಸ್ಗಢದಲ್ಲಿ 2020ರಲ್ಲಿ ಭೂಪೇಶ್ ಬಾಗೆಲ್ ಸರ್ಕಾರವು ಗೋಧನ್ ನ್ಯಾಯ ಯೋಜನೆ ಆರಂಭಿಸಿದ್ದಾರೆ. ಈ ಯೋಜನೆಯಲ್ಲಿ ಕೃಷಿಕರು, ಹೈನುಗಾರಿಕೆ ಮಾಡುವವರಿಂದ ಸಗಣಿಯನ್ನು ಕೆಜಿಗೆ 2 ರೂಪಾಯಿಯಂತೆ ಖರೀದಿಸಿ, ಅದರಿಂದ ಗೊಬ್ಬರ ತಯಾರಿಸಿ ಕಡಿಮೆ ಬೆಲೆಯಲ್ಲಿ ರೈತರಿಗೆ ಮಾರಾಟ ಮಾಡಲಾಗುವುದು. ಆ ಲೆಕ್ಕದಲ್ಲಿ 800 ಕೆಜಿ ಸಗಣಿ ಕದ್ದಿರುವ ಕಳ್ಳರು ಅದರಿಂದ 1600 ರೂಪಾಯಿ ಗಳಿಸಬಹುದು. (ಏಜೆನ್ಸೀಸ್)