FACTCHECK| ಕೋವಿಡ್ ಲಸಿಕೆ ಪಡೆದವರು ಇತರ ರೋಗಿಗಳನ್ನು ತಿನ್ನುತ್ತಿದ್ದಾರಾ?

covid
Published on

ನವದೆಹಲಿ: ಕೋವಿಡ್ ಲಸಿಕೆಯಿಂದಾಗಿ ಜಗತ್ತು ಮತ್ತೆ ಎಂದಿನಂತಾಗಬಹುದೆಂಬ ಆಶಾಕಿರಣ ಹುಟ್ಟಿದೆ. ಆದರೆ ಕಿಡಿಗೇಡಿಗಳು ಕೋವಿಡ್ ಲಸಿಕೆಯ ವಿಷಯವಾಗಿಯೂ ಇಲ್ಲಸಲ್ಲದ ಸುಳ್ಳು ಕತೆಗಳನ್ನು ಹೆಣೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಇತ್ತೀಚೆಗೆ ಅಮೇರಿಕಾದಲ್ಲಿ ಫೇಸ್​ಬುಕ್, ಟ್ವಿಟರ್ ಮತ್ತು ವಾಟ್ಸ್ಆ್ಯಪ್​ನಲ್ಲಿ ಹೆಚ್ಚು ವೈರಲ್ ಆಗಿರುವ ಸುಳ್ಳು ಸುದ್ದಿ ಎಂದರೆ ಕರೊನಾ ಲಸಿಕೆ ಪಡೆದ ರೋಗಿಗಳು ಇತರ ರೋಗಿಗಳನ್ನು ಜಾಂಬಿಗಳಂತೆ ತಿನ್ನುತ್ತಿದ್ದಾರೆ ಎಂಬುದು! ಕೋವಿಡ್ ಲಸಿಕೆ ಬಗ್ಗೆ ಈಗಾಗಲೇ ಜನಸಾಮಾನ್ಯರಲ್ಲಿ ನಾನಾ ಪ್ರಶ್ನೆಗಳು, ಗೊಂದಲ ಇವೆ, ಈ ಸಂದರ್ಭವನ್ನು ಬಳಸಿಕೊಂಡು ಈ ರೀತಿ ಭಯ ಹುಟ್ಟಿಸುವ ವದಂತಿಯ ಬಗ್ಗೆ ವಿವಿಧ ವೆಬ್​ಸೈಟ್​ಗಳು ತನಿಖೆ ನಡೆಸಿ ನಿಜಾಂಶ ಹೊರತಂದಿವೆ. ಇದನ್ನೂ ಓದಿರಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಮಾರ್ಗಸೂಚಿ ಪ್ರಕಟ: ಇಲ್ಲಿದೆ ಪೂರ್ಣ ಪಟ್ಟಿ

ಸಿಎನ್ಎನ್ ಸುದ್ದಿವಾಹಿನಿಯ ಟಿವಿ ಪ್ರಸಾರದ ಸ್ಕ್ರೀನ್​ಶಾಟ್​ನಂತೆ ಪ್ರಸಾರವಾಗುತ್ತಿರುವ ಈ ಸುದ್ದಿ ಆಸ್ಪತ್ರೆಯಲ್ಲಿ ರಕ್ತ ಚೆಲ್ಲಿರುವ ಚಿತ್ರವೊಂದನ್ನು `ಕೋವಿಡ್ ಲಸಿಕೆ ಪಡೆದವರು ಇತರ ರೋಗಿಗಳನ್ನು ತಿನ್ನುತ್ತಿರುವುದರಿಂದ ಆಸ್ಪತ್ರೆಯನ್ನು ಮುಚ್ಚಲಾಗಿದೆ' ಎಂಬ ಲಾಸ್​ಏಂಜಲೀಸ್​ನ ಬ್ರೇಕಿಂಗ್ ನ್ಯೂಸ್ ಪಟ್ಟಿಯೊಂದಿಗೆ ತೋರಿಸುತ್ತಿದೆ. ಈ ತಿರುಚಿದ ಚಿತ್ರವನ್ನು ಹಲವರು ಜಾಂಬಿಗಳ ದಾಳಿ ಆರಂಭ ಎಂದೆಲ್ಲಾ ಅಡಿಬರಹ ಬರೆದು ಶೇರ್ ಮಾಡುತ್ತಿದ್ದಾರೆ. ಜನರು ಈ ನಕಲಿ ಚಿತ್ರವನ್ನು ಟ್ವಿಟರ್ ಮತ್ತು ವಾಟ್ಸ್​ಆ್ಯಪ್​ಗಳಲ್ಲಿ ಕೂಡ ಯದ್ವಾತದ್ವಾ ಶೇರ್ ಮಾಡುತ್ತಿದ್ದಾರೆ.

ಈ ನಕಲಿ ಚಿತ್ರವನ್ನು 9ಗ್ಯಾಗ್ ಮತ್ತು ಐಫನ್ನಿಯಂತಹ ಮೀಮ್ ಗಳನ್ನು ಹಾಕುವ ವೆಬ್​ಸೈಟ್​ ಗಳು ಕೂಡ ಪ್ರಸಾರ ಮಾಡುತ್ತಿವೆ. ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಮೂಲ ಚಿತ್ರವು 2019 ರ ಫೆಬ್ರವರಿ 14 ರಂದು ನ್ಯೂಯಾರ್ಕ್ ಟೈಮ್ಸ್​ನಲ್ಲಿ ಪ್ರಕಟವಾದ ಒಂದು ಚಿತ್ರಕಥನದ ಭಾಗ ಎಂಬುದು ಬೆಳಕಿಗೆ ಬಂದಿದೆ. 2019 ರಲ್ಲಿ ಟೆಂಪಲ್ ಯುನಿವರ್ಸಿಟಿ ಹಾಸ್ಪಿಟಲ್ ನಲ್ಲಿ ಮೂರನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಎರಿಕ್ ಕುರ್ರನ್ ಎಂಬಾತ ಈ ಚಿತ್ರವನ್ನು ಬಳಸಿ ಒಂದು ಅಭಿಪ್ರಾಯಲೇಖನವನ್ನು ಬರೆದಿದ್ದ. ಆಸ್ಪತ್ರೆಯ ತುರ್ತುಚಿಕಿತ್ಸಾ ಘಟಕದಲ್ಲಿ ಗುಂಡುಬಿದ್ದಿದ್ದ ಯುವಕನೊಬ್ಬನನ್ನು ಉಳಿಸಿಕೊಳ್ಳಲು ವಿಫಲ ಪ್ರಯತ್ನ ನಡೆಸಿದ ನಂತರದ ರಕ್ತ ಹರಡಿದ ಟ್ರಾಮಾ ಬೇ ಚಿತ್ರ ಎಂದು ಅದನ್ನು ಒದಗಿಸಿದ್ದ. ಈ ಚಿತ್ರವು ಮೇಕ್​ಎಮೀಮ್ ವೆಬ್​ಸೈಟ್​ನಲ್ಲಿ ಕೂಡ ಲಭ್ಯವಿರುವುದು ಕಂಡುಬಂದಿದೆ. ಇದನ್ನೂ ಓದಿರಿ ಗ್ರಾಮ ಪಂಚಾಯಿತಿ ರಾಜಕೀಯಕ್ಕೆ 4 ವರ್ಷದ ಮಗು ಬಲಿ?

ಈಗ ಅದೇ ಚಿತ್ರವನ್ನು ಸಿಎನ್ಎನ್ ಚಿಹ್ನೆ ಬಳಸುವುದೂ ಸೇರಿದಂತೆ ಟಿವಿಯಲ್ಲಿ ಪ್ರಸಾರದ ತುಣುಕಿನಂತೆ ಕಾಣಲು ಹೊಸ ಮಾರ್ಪಾಟುಗಳನ್ನು ಮಾಡಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಿಗೆ ಬಿಡುಗಡೆ ಮಾಡಿದ್ದಾರೆ. ಕರೊನಾ ಲಸಿಕೆಯ ನಂತರ ಯಾವುದೇ ಆಸ್ಪತ್ರೆಯನ್ನು ಮುಚ್ಚಲಾದ ವರದಿಗಳೇ ಬಂದಿಲ್ಲ. ಹಾಗೇ, ಅದೇ ಚಿತ್ರದಲ್ಲಿ ಒಂದು ಸಾಲಿನ ಸುದ್ದಿಯಂತೆ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟಿಟೀವ್ಸ್​ನ ಸ್ಪೀಕರ್ ಆದ ನ್ಯಾನ್ಸಿ ಪೆಲೋಸಿ ಅವರು ಡಿಐಯು (ಅಮಲಿನಲ್ಲಿ ಕಾರು ಚಾಲನೆ ನಡೆಸಿದ) ಆರೋಪಕ್ಕೆ ಬಂಧಿಸಲ್ಪಟ್ಟಿದ್ದಾರೆ ಎಂಬ ವರದಿ ಕೂಡ ನಕಲಿ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net