

ಲಂಡನ್/ಜಿನೀವಾ/ನವದೆಹಲಿ: ಕರೊನಾ ವೈರಸ್ನ ಒಮಿಕ್ರಾನ್ ಮತ್ತು ಡೆಲ್ಟಾ ರೂಪಾಂತರಿಗಳ ಸಂಯೋಜನೆಯಿಂದ ಒಂದು ‘ಸೂಪರ್ ಪ್ರಭೇದ’ ಸೃಷ್ಟಿಯಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವ್ಯಕ್ತಿಯ ಮೇಲೆ ಡೆಲ್ಟಾ ಮತ್ತು ಒಮಿಕ್ರಾನ್ ತಳಿ ಏಕಕಾಲಕ್ಕೆ ದಾಳಿ ಮಾಡಿದರೆ ಆ ರೋಗಿ ‘ಸೂಪರ್ ಪ್ರಭೇದ’ದ ರೋಗಿಯಾಗುತ್ತಾನೆ ಎಂದು ಮಾಡರ್ನಾ ಔಷಧ ಕಂಪನಿಯ ಮುಖ್ಯ ವೈದ್ಯಾಧಿಕಾರಿ ಪೌಲ್ ಬರ್ಟನ್ ಹೇಳಿದ್ದಾರೆ. ಜಗತ್ತಿನಾದ್ಯಂತ ಒಮಿಕ್ರಾನ್ ಹರಡುವ ವೇಗ ಗಮನಿಸಿದರೆ ಸೂಪರ್ ಪ್ರಭೇದದ ಸಾಧ್ಯತೆಯನ್ನು ತಳ್ಳಿ ಹಾಕಲಾಗದು ಎಂದು ಬ್ರಿಟನ್ ಸಂಸತ್ತಿನ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿಗೆ ಬರ್ಟನ್ ತಿಳಿಸಿದ್ದಾರೆ.
3 ದಿನಗಳಲ್ಲಿ ದುಪ್ಪಟ್ಟಾಗುವ ಒಮಿಕ್ರಾನ್: ಹೊಸದಾಗಿ ಆತಂಕ ಸೃಷ್ಟಿಸಿರುವ ಒಮಿಕ್ರಾನ್ ರೂಪಾಂತರಿ 89 ದೇಶಗಳಲ್ಲಿ ಪತ್ತೆಯಾಗಿದೆ. ಸಾಮುದಾಯಿಕ ಹರಡುವಿಕೆಯ ಪ್ರದೇಶಗಳಲ್ಲಿ ಅದು ಒಂದೂವರೆಯಿಂದ 3 ದಿನದಲ್ಲಿ ದುಪ್ಪಟ್ಟುಗೊಳ್ಳುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಶನಿವಾರ ಹೇಳಿದೆ. ಡೆಲ್ಟಾಗಿಂತ ಒಮಿಕ್ರಾನ್ ಹರಡುವಿಕೆ ವೇಗ ಶೇ. 70ರಷ್ಟು ಹೆಚ್ಚಿದೆ. ಜನಸಂಖ್ಯೆ ಹೆಚ್ಚಿರುವ ದೇಶಗಳಲ್ಲಿ ಒಮಿಕ್ರಾನ್ ತುಂಬಾ ವೇಗವಾಗಿ ಹರಡುತ್ತಿದೆ. ಆದರೆ, ರೋಗನಿರೋಧಕ ಶಕ್ತಿಯ (ಇಮ್ಯುನಿಟಿ) ಮೇಲೆ ದಾಳಿ ಮಾಡುವ ಮತ್ತು ಸೋಂಕು ಹರಡುವ ವೈರಸ್ನ ಅಂತರ್ಗತ ಅಧಿಕ ಸಾಮರ್ಥ್ಯ ಇದಕ್ಕೆ ಕಾರಣವೇ ಅಥವಾ ಅವೆರಡೂ ಒಟ್ಟಿಗೇ ಕಾರಣವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಡಬ್ಲ್ಯುಎಚ್ಒ ಹೇಳಿದೆ.
ಲಸಿಕೆ ಸಾಗಾಟ ಸಾಧನಕ್ಕೆ 18% ಜಿಎಸ್ಟಿ: ಕೋವಿಡ್ ಲಸಿಕೆ ಒಯ್ಯುವ ಹಲವು ಸಾಧನಗಳಿಗೆ ಶೇಕಡ 18 ಸರಕು ಮತ್ತು ಸೇವಾ ತೆರಿಗೆ ಆಕರವಾಗುವ ಸಂಭವವಿದೆ. ಕರೊನಾ ವ್ಯಾಕ್ಸಿನ್ ಸಾಗಿಸುವುದಕ್ಕಾಗಿಯೇ ಎಂದು ಉತ್ಪಾದಿಸಿದ ಸಾಧನಗಳನ್ನು ಹೊರತು ಪಡಿಸಿ ಸಾಗಾಟದ ಇತರ ಸಾಧನಗಳ ಮೇಲೆ ಹೆಚ್ಚುವರಿ ತೆರಿಗೆ ಹೇರಬಹುದು ಎಂದು ಉತ್ತರ ಪ್ರದೇಶದ ಜಿಎಸ್ಟಿ ಕುರಿತ ಅಡ್ವಾನ್ಸ್ ಮೇಲ್ಮನವಿ ಪ್ರಾಧಿಕಾರ (ಎಎಆರ್) ತೀರ್ಪು ನೀಡಿದೆ. ಇದರಿಂದಾಗಿ ಕೋವಿಡ್ ಲಸಿಕೆ ಅಭಿಯಾನದಲ್ಲಿ ಬಳಸುವ ಹಲವು ಸಾಧನಗಳ ಜಿಎಸ್ಟಿ ಏರಿಕೆಯಾಗಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
62 ಲಕ್ಷ ಡೋಸ್ ವ್ಯರ್ಥ: ಭಾರತದಲ್ಲಿ ಲಸಿಕೆಯ 62 ಲಕ್ಷಕ್ಕೂ ಅಧಿಕ ಡೋಸ್ ಬಳಸದೆ ಹಾಳಾಗಿದೆ. ಆ ಪೈಕಿ ಅರ್ಧದಷ್ಟು ಮಧ್ಯ ಪ್ರದೇಶ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲೇ ವ್ಯರ್ಥವಾಗಿದೆ ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪವಾರ್ ಸಂಸತ್ತಿಗೆ ತಿಳಿಸಿದ್ದಾರೆ. ಕಳೆದ 11 ತಿಂಗಳಲ್ಲಿ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಲಸಿಕೆಯನ್ನು ಬಳಸದೆ ವ್ಯರ್ಥ ಮಾಡಿವೆ. ಕರ್ನಾಟಕ (1,27 ಲಕ್ಷ) ಸಹಿತ 11 ರಾಜ್ಯಗಳು ತಲಾ ಒಂದು ಲಕ್ಷ ಡೋಸ್ಗಿಂತ ಅಧಿಕ ಲಸಿಕೆ ವೇಸ್ಟ್ ಮಾಡಿವೆ.
ಸರ್ಟಿಫಿಕೆಟ್ ಹಾವಳಿ: ಕೇಂದ್ರ ಸಚಿವರಾದ ಅಮಿತ್ ಷಾ, ನಿತಿನ್ ಗಡ್ಕರಿ, ಪಿಯುಷ್ ಗೋಯಲ್ ಮೊದಲಾದ ಹೆಸರನ್ನು ಹೋಲುವ ಹೆಸರಿನಲ್ಲಿ ಕೋವಿಡ್ ವ್ಯಾಕ್ಸಿನ್ ಸರ್ಟಿಫಿಕೆಟ್ ಕೊಡುವ ಜಾಲವೊಂದು ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ಪತ್ತೆಯಾಗಿದೆ.
ಡ್ರೋನ್ನಿಂದ ವ್ಯಾಕ್ಸಿನ್ ಸಾಗಾಟ: ಮಹಾರಾಷ್ಟ್ರದ ಪಲ್ಘಾರ್ ಜಿಲ್ಲೆಯ ತೀರಾ ಒಳನಾಡಿನ ಗ್ರಾಮವೊಂದಕ್ಕೆ ಕೋವಿಡ್ ಲಸಿಕೆಯನ್ನು ಅಧಿಕಾರಿಗಳು ಡ್ರೋನ್ ಮೂಲಕ ಸಾಗಿಸಿದ್ದಾರೆೆ. ಜವ್ಹಾರ್ನಿಂದ ಝಾಪ್ ಗ್ರಾಮಕ್ಕೆ 300 ಲಸಿಕೆಗಳ ಬ್ಯಾಚ್ಅನ್ನು ಡ್ರೋನ್ನಿಂದ ಕೇವಲ ಒಂಬತ್ತು ನಿಮಿಷದಲ್ಲಿ ಸಾಗಿಸಲಾಗಿದೆ. ಮಾಮೂಲಿ ಸಾರಿಗೆಯಲ್ಲಾದರೆ 40 ನಿಮಿಷ ಬೇಕಾಗುತ್ತಿತ್ತು.
ಭಾರತಕ್ಕೆ ಹೆಚ್ಚು ಅಪಾಯವಿಲ್ಲ: ಒಮಿಕ್ರಾನ್ನಿಂದ ಭಾರತಕ್ಕೆ ಹೆಚ್ಚು ಅಪಾಯವಿಲ್ಲ. ಬ್ರಿಟನ್ ಮಾದರಿಯನ್ನು ಇಲ್ಲಿಗೂ ಅನ್ವಯಿಸಲಾಗದು ಎಂದು ರಾಷ್ಟ್ರೀಯ ಕೋವಿಡ್-19 ಸೂಪರ್ ಮಾಡೆಲ್ ಸಮಿತಿಯ ಮುಖ್ಯಸ್ಥ ಎಂ. ವಿದ್ಯಾಸಾಗರ್ ಹೇಳಿದ್ದಾರೆ. ‘ಬ್ರಿಟನ್ ಮಾದರಿ ಭಾರತಕ್ಕೆ ಅಪ್ರಸ್ತುತ’ ಎಂದು ಹೈದರಾಬಾದ್ನ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಪ್ರೊಫೆಸರ್ ವಿದ್ಯಾಸಾಗರ್ ಸ್ಪಷ್ಟಪಡಿಸಿದ್ದಾರೆ. ಬ್ರಿಟನ್ನಲ್ಲಿ ಸೆರೊ-ಪಾಸಿಟಿವಿಟಿ ಕಡಿಮೆಯಿದೆ ಹಾಗೂ ವ್ಯಾಕ್ಸಿನ್ ಪರಿಣಾಮತ್ವದ ಪ್ರಮಾಣ ಕಡಿಮೆಯಿದೆ. ಆದರೆ ಭಾರತದಲ್ಲಿ ಅದಕ್ಕೆ ತದ್ವಿರುದ್ಧವಾದ ಸನ್ನಿವೇಶವಿರುವುದರಿಂದ ಸೋಂಕು ಪ್ರಮಾಣ ಕಡಿಮೆಯಿರುತ್ತದೆ. ಅಜಾಗ್ರತೆ ಹೆಚ್ಚಾದರೆ ಫೆಬ್ರವರಿಯಲ್ಲಿ 3ನೇ ಅಲೆ ಸಾಧ್ಯತೆ ಇದೆ ಎಂದಿದ್ದಾರೆ.