

|ಕಿರಣ್ ಮಾದರಹಳ್ಳಿ ಚಾಮರಾಜನಗರ
ಕೋವಿಡ್ನಿಂದ ಮೃತಪಟ್ಟಿರುವವರ ಕುಟುಂಬಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನೀಡುವ ಪರಿಹಾರ ಸಿಗದೆ ಸಂತ್ರಸ್ತರು ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದರೆ, ಜಿಲ್ಲೆಯಲ್ಲಿ ಜೀವಂತವಾಗಿರುವ 6 ಜನ ಪರಿಹಾರಕ್ಕಾಗಿ ಆಯ್ಕೆಯಾಗಿದ್ದಾರೆ!
ಇದೇನಿದು? ಎಂದು ಹುಬ್ಬೇರಿಸಬೇಡಿ. ಜಿಲ್ಲಾಡಳಿತ ನೀಡಿರುವ ಮಾಹಿತಿ ಪ್ರಕಾರ ಕೋವಿಡ್ ಸೋಂಕಿತರಾಗಿ ಚೇತರಿಸಿಕೊಂಡಿರುವ 6 ಜನ ಮೃತಪಟ್ಟವರ ಪಟ್ಟಿಗೆ ಸೇರಿದ್ದರು. ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ನೀಡಿದ್ದ 566 ಮೃತರ ಪಟ್ಟಿಯಲ್ಲಿ ಕೊಳ್ಳೇಗಾಲ ತಾಲೂಕಿನ ಮೂವರು, ಚಾಮರಾಜನಗರ ತಾಲೂಕಿನ ಇಬ್ಬರು, ಹನೂರು ತಾಲೂಕಿನ ಒಬ್ಬರು ಹಾಗೂ ಹೊರ ಜಿಲ್ಲೆಯ ಒಬ್ಬರ ಹೆಸರು ಸೇರಿತ್ತು. ಜಿಲ್ಲಾಡಳಿತದಿಂದ ಪಟ್ಟಿಯ ಪರಿಶೀಲನೆ ನಡೆಸಿ, ಮೃತರ ಮನೆಗಳಿಗೆ ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಸಹಾಯಕರನ್ನು ಕಳುಹಿಸಿ ವಿಚಾರಣೆ ನಡೆಸಿದ ಬಳಿಕ 6 ಜನ ಜೀವಂತವಾಗಿರುವುದು ತಿಳಿದುಬಂದಿದೆ. ಹೀಗಾಗಿ, ಜಿಲ್ಲಾಡಳಿತ ಅವರ ಹೆಸರನ್ನು ಪರಿಹಾರದ ಪಟ್ಟಿಯಿಂದ ಕೈಬಿಟ್ಟಿದೆ.
ಪರಿಹಾರಕ್ಕೆ ಅರ್ಹರಾಗಿರುವ 10 ಜನರಿಗೆ ವಿಳಾಸ ಮತ್ತು ವಾರಸುದಾರರಲಿಲ್ಲ. ಹೊರ ರಾಜ್ಯದಿಂದ ಬಂದು ಚಾಮರಾಜನಗರದಲ್ಲಿ ಚಿಕಿತ್ಸೆ ಪಡೆದಿರುವವರು, ಆಸ್ಪತ್ರೆಗೆ ದಾಖಲಾದ ವೇಳೆ ಬೇರೆ ವಿಳಾಸ ನೀಡಿ ಪ್ರಸ್ತುತ ಅಲ್ಲಿ ವಾಸ ಇಲ್ಲದೆ ಇರುವ 5 ಪ್ರಕರಣ ಮತ್ತು ಸೋಂಕಿನಿಂದ ಮೃತಪಟ್ಟ ಐವರು ಅನಾಥರ ಪರವಾಗಿ ಪರಿಹಾರದ ಹಣ ಪಡೆಯಲು ವಾರಸುದಾರರಲಿಲ್ಲ. ಜಿಲ್ಲೆಯ 566 ಫಲಾನುಭವಿಗಳಲ್ಲಿ 464 ಅರ್ಹರನ್ನು ಗುರುತಿಸಲಾಗಿದೆ. ಅವರಲ್ಲಿ 332 ಪ್ರಕರಣಗಳಿಗೆ (ಬಿಪಿಎಲ್ ಕಾರ್ಡ್ ಬಳಕೆದಾರರು) 1.50 ಲಕ್ಷ ರೂ. ಮತ್ತು 132 (ಎಪಿಎಲ್ ಕಾರ್ಡ್ದಾರರು) ಜನರಿಗೆ 50 ಸಾವಿರ ರೂ. ವಿತರಣೆಯಾಗಿದ್ದು, ಕೆಲವರು ಸೂಕ್ತ ದಾಖಲೆ ಒದಗಿಸದ, ಆಧಾರ್ ಕಾರ್ಡ್ ಲಿಂಕ್ ಮಾಡಿಸದ, ಪೋರ್ಟಲ್ನಲ್ಲಿ ಹೆಸರು ನೊಂದಣಿಯಾಗದ ಕಾರಣ ಪರಿಹಾರ ಸಿಕ್ಕಿಲ್ಲ.