ಶೀಘ್ರದಲ್ಲೇ ಕೋವಿಡ್ ನಿಯಮಾವಳಿ ಜಾರಿ; ಮುನ್ನೆಚ್ಚರಿಕೆ ಕೈಗೊಳ್ಳಲು ಕೇಂದ್ರ ಸೂಚನೆ

Corona
Published on

ಹುಬ್ಬಳ್ಳಿ: ಕಳೆದ 8- 10 ದಿನದಿಂದ ಕೇರಳ ಮತ್ತು ಮಹಾರಾಷ್ಟ್ರ ಸೇರಿ ವಿವಿಧೆಡೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಈಗಾಗಲೇ ರಾಜ್ಯ ಸರ್ಕಾರಕ್ಕೆ ಸೂಚನೆ ಕೊಟ್ಟಿದೆ. ಈ ಸಂಬಂಧ ಶೀಘ್ರ ನಿಯಮಾವಳಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

27ಕ್ಕೆ ಪಿಎಂ ಸಭೆ: ಭಾನುವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಏ. 27ರಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ವಿಡಿಯೋ ಕಾನ್ಪರೆನ್ಸ್ ಸಭೆ ಕರೆದಿದ್ದಾರೆ. ಸಭೆ ಬಳಿಕ ಸ್ಪಷ್ಟ ಸೂಚನೆ ಹೊರಡಿಸುತ್ತೇವೆ. ಎರಡನೇ ಅಲೆ ಬಂದಾಗ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಪ್ರಾರಂಭವಾಗಿ ನಂತರ ಉಲ್ಬಣವಾಯಿತು. ಮೂರು ಅಲೆಗಳನ್ನು ಗಮನಿಸಿದಾಗ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಸೂಕ್ತ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ ಎಂದು ಅವರು ಮಾಹಿತಿ ಹಂಚಿಕೊಂಡರು.

ದೇಶದಲ್ಲಿ 2,593 ಹೊಸ ಕೇಸ್: ದೇಶದಲ್ಲಿ ಭಾನುವಾರ ಬೆಳಗ್ಗೆ ಅಂತ್ಯಗೊಂಡ 24 ಗಂಟೆ ಅವಧಿಯಲ್ಲಿ ಕರೊನಾ ಸೋಂಕಿನ 2,593 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದೇ ಅವಧಿಯಲ್ಲಿ 44 ಜನರು ಮರಣಿಸಿದ್ದಾರೆ. ಇದರೊಂದಿಗೆ ಸೋಂಕಿತರ ಒಟ್ಟು ಸಂಖ್ಯೆ 4,30,57,545ಕ್ಕೆ ಏರಿದ್ದು ಸಾವಿನ ಸಂಖ್ಯೆ 5,22,193ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸಕ್ರಿಯ ಪ್ರಕರಣ ಗಳ ಪ್ರಮಾಣ ಶೇಕಡ 0.04 ಆಗಿದೆ.

ರಾಜ್ಯದಲ್ಲಿ ಕೊಂಚ ಇಳಿಕೆ: ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ 100ರ ಗಡಿ ಮೀರಿದ್ದ ಕರೊನಾ ಸೋಂಕು ಸೋಂಕು ಪ್ರಕರಣಗಳು ಭಾನುವಾರ ಕೊಂಚ ಇಳಿಕೆಯಾಗಿದೆ. 60 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ದಿನದ ಸೋಂಕು ಪ್ರಮಾಣ ದರ ಶೇ.0.72ಕ್ಕೆ ಇಳಿಮುಖವಾಗಿದೆ. ಮತ್ತೊಂದೆಡೆ 63 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,626ಕ್ಕೆ ತಗ್ಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net