ಆಗಷ್ಟೇ ಹುಟ್ಟಿದ ಮಗುವಿಗೂ ಕರೊನಾ ಸೋಂಕು!; ಆದರೆ ಅಮ್ಮ ಕೋವಿಡ್ ನೆಗೆಟಿವ್!

Untitled-1
Published on

ನವದೆಹಲಿ: ಅಮ್ಮ ಕೋವಿಡ್ ಪಾಸಿಟಿವ್ ಆಗಿದ್ದು ಹುಟ್ಟಿದ ಮಗುವಿಗೆ ನೆಗೆಟಿವ್ ಆಗಿದ್ದರೆ ಅಥವಾ ಪಾಸಿಟಿವ್ ಆಗಿದ್ದರೂ ಅಷ್ಟೇನೂ ವಿಶೇಷ ಎನಿಸದೆ ಇರಬಹುದು. ಆದರೆ ಇಲ್ಲೊಬ್ಬರು ತಾಯಿ ಕೋವಿಡ್ -19 ನೆಗೆಟಿವ್ ಆಗಿದ್ದರೂ ಆಕೆಯ ನವಜಾತ ಶಿಶುವಿನಲ್ಲಿ ಸೋಂಕು ಕಂಡುಬರುವ ಮೂಲಕ ಅಚ್ಚರಿ ಉಂಟಾಗಿದೆ.

ತಾಯಿ ನೆಗೆಟಿವ್ ಆಗಿದ್ದರೂ ಆಗಷ್ಟೇ ಹುಟ್ಟಿರುವ ಮಗು ಕರೊನಾ ಪಾಸಿಟಿವ್ ಆಗಿರುವುದು ಆ ಆಸ್ಪತ್ರೆಯ ವೈದ್ಯರನ್ನೇ ಅಚ್ಚರಿಗೀಡು ಮಾಡಿದೆ. ಅಂದಹಾಗೆ ಈ ಹೆರಿಗೆ ಬನಾರಸ್​ನ ಹಿಂದು ವಿಶ್ವವಿದ್ಯಾಲಯದ ಎಸ್​ಎಸ್​ಎಲ್ ಆಸ್ಪತ್ರೆಯಲ್ಲಿ ಮೇ 25ರಂದು ನಡೆದಿದೆ.

26 ವರ್ಷದ ಮಹಿಳೆಯೊಬ್ಬರು ಹೆರಿಗೆಗಾಗಿ ಈ ಆಸ್ಪತ್ರೆಗೆ ಮೇ 24ರಂದು ಈ ಆಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆಗೂ ಮುನ್ನ ಇವರನ್ನು ಕರೊನಾ ಟೆಸ್ಟ್​ಗೆ ಒಳಪಡಿಸಿದ್ದು, ಅದು ನೆಗೆಟಿವ್ ಎಂದು ವರದಿ ಬಂದಿತ್ತು. ಆದರೆ ಮೇ 25ರಂದು ಹುಟ್ಟಿದ ಮಗುವನ್ನು ಕೋವಿಡ್ ಟೆಸ್ಟ್​ಗೆ ಒಳಪಡಿಸಿದ್ದಾಗ ಕೋವಿಡ್ ಪಾಸಿಟಿವ್ ಎಂಬ ವರದಿ ಬಂದಿದೆ.

ತಾಯಿ ನೆಗೆಟಿವ್, ಮಗು ಪಾಸಿಟಿವ್ ಆಗಿದ್ದರೂ ಸದ್ಯ ಇಬ್ಬರೂ ಆರೋಗ್ಯವಾಗಿದ್ದಾರೆ. ಇದೊಂದು ಅತಿವಿರಳ ಪ್ರಕರಣ. ಈ ಬಗ್ಗೆ ನಾವು ತಕ್ಷಣಕ್ಕೆ ಏನೂ ಹೇಳಲು ಸಾಧ್ಯವಿಲ್ಲ. ತಾಯಿ-ಮಗು ಇಬ್ಬರನ್ನೂ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುವುದು. ಆ ಬಳಿಕ ಮತ್ತೆ ವರದಿ ಪರಿಶೀಲಿಸಿ ಮುಂದಿನ ನಿರ್ಧಾರ ತಳೆಯಲಾಗುವುದು ಎಂದು ಎಸ್​ಎಸ್​ಎಲ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಕೆ.ಕೆ. ಗುಪ್ತ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net