

ನವದೆಹಲಿ: ಕರೊನಾ ವೈರಾಣು ಸೋಂಕು ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ದಿನವೂ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಬಲಿಪಡೆಯುತ್ತಲೇ ಇದೆ. ಇದರಿಂದಾಗಿ ಶವಸಂಸ್ಕಾರಕ್ಕೆ ಸ್ಥಳಾವಕಾಶದ ಕೊರತೆ ಉಂಟಾಗಿ ಕುಟುಂಬಸ್ಥರು ಪರದಾಡುವಂತಾಗಿದೆ. ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸ್ಥಳೀಯ ಸರ್ಕಾರಗಳು ಶೀತಲೀಕೃತ ಟ್ರಕ್ಗಳನ್ನು ವ್ಯವಸ್ಥೆ ಮಾಡುತ್ತಿದ್ದು, ಅದರಲ್ಲಿ ಶವಗಳನ್ನು ಸಂರಕ್ಷಿಸಿಡಲಾಗುತ್ತಿದೆ.
ಇದು ಅಮೆರಿಕದಲ್ಲಿನ ಸದ್ಯದ ಪರಿಸ್ಥಿತಿ. ಇದಕ್ಕೂ ಮುನ್ನ ಕೋವಿಡ್-19 ಪಿಡುಗು ತಾರಕದಲ್ಲಿದ್ದಾಗ ನ್ಯೂಯಾರ್ಕ್ನಲ್ಲಿ ಸಾಯುವವರ ಸಂಖ್ಯೆ ಹೆಚ್ಚಾಗಿತ್ತು. ಆಗಲೂ ಕೂಡ ಇದೇ ರೀತಿ ಶೀತಲೀಕೃತ ಟ್ರಕ್ಗಳಲ್ಲಿ ಶವಗಳನ್ನು ಸಂರಕ್ಷಿಸಿ ಇಡಲಾಗುತ್ತಿತ್ತು. ಇದೀಗ ಈ ಪ್ರವೃತ್ತಿ ಅಮೆರಿಕದ ಟೆಕ್ಸಾಸ್ ಮತ್ತು ಆರಿಜೋನಾಗಳಿಗೆ ವಿಸ್ತರಿಸಿದೆ.
ಟೆಕ್ಸಾಸ್ನಲ್ಲಿ ಇದುವರೆಗೂ 3,700 ಜನರು ಮೃತಪಟ್ಟಿದ್ದಾರೆ. ಅಲ್ಲಿ ಈಗಲೂ ಪ್ರತಿದಿನ ಅಂದಾಜು 129 ಜನರ ಕರೊನಾಕ್ಕೆ ಬಲಿಯಾಗುತ್ತಿದ್ದಾರೆ. ಇವರೆಲ್ಲರ ಅಂತ್ಯಸಂಸ್ಕಾರಕ್ಕೆ ಸ್ಥಳಾವಕಾಶದ ಕೊರತೆ ಉಂಟಾಗಿದೆ. ಸ್ಯಾನ್ ಆಂಟೋನಿಯೋ ಮತ್ತು ಕಾರ್ಪಸ್ ಕ್ರಿಸ್ಟಿ ಎಂಬ ಊರುಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹಾಗಾಗಿ ಆ ಊರುಗಳಲ್ಲಿ ಸ್ಥಳೀಯ ಆಡಳಿತಗಳು ಶವಗಳನ್ನು ಸಂರಕ್ಷಿಸಿಡಲು ಶೀತಲೀಕೃತ ಟ್ರಕ್ಗಳು ಮತ್ತು ಟ್ರೇಲರ್ಗಳನ್ನು ವ್ಯವಸ್ಥೆ ಮಾಡುತ್ತಿವೆ.
ಇಷ್ಟೊಂದು ಶವಗಳ ಸಂಸ್ಕಾರಕ್ಕೆ ಸ್ಥಳಾವಕಾಶವೇ ಇಲ್ಲವಾಗಿದೆ. ಇದು ಅಚ್ಚರಿಯೆನಿಸಿದರೂ ಸತ್ಯ. ಹಾಗಾಗಿ ನಾವು ಆಯಕಟ್ಟಿನ ಸ್ಥಳಗಳಲ್ಲಿ ಶೀತಲೀಕೃತ ಟ್ರಕ್ ಮತ್ತು ಟ್ರೇಲರ್ಗಳನ್ನು ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಸ್ಯಾನ್ ಆಂಟಾನಿಯೋದ ಮೇಯರ್ ರಾನ್ ನಿರೆಂಬರ್ಗ್ ತಿಳಿಸಿದ್ದಾರೆ.
ಆರಿಜೋನಾ ರಾಜ್ಯದಲ್ಲಿ ಕೂಡ ಇದುವರೆಗೆ 2,500ಕ್ಕೂ ಹೆಚ್ಚು ಜನರ ಕೋವಿಡ್ಗೆ ಬಲಿಯಾಗಿದ್ದಾರೆ. ಶವಗಳನ್ನು ಇರಿಸಲು ಆಸ್ಪತ್ರೆಯ ಶವಗಾರಗಳಲ್ಲಿ ಸ್ಥಳದ ಕೊರತೆ ಉಂಟಾಗಿದೆ. ಹಾಗಾಗಿ ಮಾರಿಕೋಪಾ ಕೌಂಟಿ ಮತ್ತು ಫೀನಿಕ್ಸ್ ನಗರಗಳಲ್ಲಿ ತಲಾ 294 ಶವಗಳನ್ನು ಇರಿಸಲು ಸಮರ್ಥವಾದ 14 ಶೀತಲೀಕೃತ ಟ್ರಕ್ಗಳನ್ನು ವ್ಯವಸ್ಥೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.