

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿನ ಪ್ರಮಾಣ ಹೊಸ ವರ್ಷದಿಂದ ಏರುತ್ತಲೇ ಇದ್ದು, ನಿನ್ನೆ ದುಪ್ಪಟ್ಟಾಗಿದ್ದಾರೆ, ಇಂದು ಬಹುತೇಕ ಎರಡು ಪಟ್ಟಾಗಿದೆ. ಮತ್ತೊಂದೆಡೆ ಒಮಿಕ್ರಾನ್ ಪ್ರಕರಣಗಳೂ ಹೆಚ್ಚಾಗುತ್ತಿದ್ದು, ರೂಪಾಂತರಿ ಕೂಡ ಆತಂಕಕಾರಿ ಆಗಿ ಪರಿಣಮಿಸಿದೆ.
ಜ. 1, 2 ಮತ್ತು 3ರಂದು ಸತತವಾಗಿ 1 ಸಾವಿರ ಜನರಲ್ಲಿ ಸೋಂಕು ದೃಢಪಟ್ಟಿದ್ದು, ಜ. 4ರಂದು ದುಪ್ಪಟ್ಟಾಗಿತ್ತು. ಅಂದರೆ ನಿನ್ನೆ 2, 479 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಒಮಿಕ್ರಾನ್ ಸೋಂಕಿನ ಪ್ರಮಾಣ 77ಕ್ಕೆ ಏರಿತ್ತು. ಅಲ್ಲದೆ ಪಾಸಿಟಿವಿಟಿ ದರ ಶೇ. 2.59 ಆಗಿತ್ತು.
ಆದರೆ ಇಂದು ಕಳೆದ ಇಪ್ಪತ್ತನಾಲ್ಕು ಗಂಟೆಗಳಲ್ಲಿ 4,246 ಮಂದಿಯಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ನಿನ್ನೆಗಿಂತ ಬಹುತೇಕ ದುಪ್ಪಟ್ಟಾಗಿದೆ. ಈ ಪೈಕಿ ಶೇ. 85 ಅಂದರೆ 3,605 ಪ್ರಕರಣಗಳು ಬೆಂಗಳೂರಿನಲ್ಲೇ ಪತ್ತೆಯಾಗಿವೆ. ಅಲ್ಲದೆ ಪಾಸಿಟಿವಿಟಿ ಪ್ರಮಾಣ ಕೂಡ ಶೇ. 3.33ಗೆ ಏರಿದ್ದು, ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 226 ಆಗಿದೆ. ಒಟ್ಟಿನಲ್ಲಿ ಕೋವಿಡ್ ತೀವ್ರಗತಿಯಲ್ಲಿ ವ್ಯಾಪಿಸುತ್ತಿದ್ದು, ಸರ್ಕಾರ ಹೆಚ್ಚಿನ ನಿಗಾ ವಹಿಸುವ ಜತೆಗೆ ಜನರು ಕೂಡ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.