

ಆನೇಕಲ್: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ನಡುರಸ್ತೆಯಲ್ಲೇ ಗುಂಡಿಟ್ಟು ಕೊಲೆ ಮಾಡಲಾಗಿದೆ. ಪರಿಣಾಮವಾಗಿ, ಕಾರೊಳಗೇ ಅವರು ಪ್ರಾಣಬಿಟ್ಟಿದ್ದು, ಶವ ರಕ್ತಸಿಕ್ತವಾಗಿದೆ. ಬೆಂಗಳೂರಿನ ಆನೇಕಲ್ನ ಶಿವಾಜಿ ವೃತ್ತದ ಬಳಿ ಈ ಘಟನೆ ಸಂಭವಿಸಿದೆ.
ರಿಯಲ್ ಎಸ್ಟೇಟ್ ಉದ್ಯಮಿ ರಾಜಶೇಖರ ರೆಡ್ಡಿ ಕೊಲೆಯಾದವರು. ಇವರು ಮಾರುತಿ ಸ್ವಿಫ್ಟ್ ಕಾರಿನಲ್ಲಿ ಪಟ್ಟಣದ ಕೋರ್ಟ್ಗೆ ಬಂದಿದ್ದರು. ಇವರು ಕಾರಿನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ತಡೆದು ಗುಂಡು ಹಾರಿಸಿದ್ದಾರೆ.
ಕಾರಿನ ಬಲಭಾಗದ ಗಾಜಿನ ಮೂಲಕ ಗುಂಡು ಹೊಡೆದಿದ್ದು, ಅದು ಉದ್ಯಮಿಯೇ ಕುತ್ತಿಗೆಗೇ ಹೋಗಿ ನಾಟಿದೆ. ಗುಂಡೇಟಿನಿಂದ ಕತ್ತಿನ ಭಾಗದಲ್ಲಿ ತೀವ್ರವಾದ ಗಾಯವಾಗಿದ್ದು, ಅಲ್ಲೇ ಪ್ರಾಣ ಬಿಟ್ಟಿದ್ದಾರೆ. ಆ ನಂತರವೂ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ಪರಾರಿಯಾಗಿದ್ದಾರೆ.
ಕೆಎ 01 ಎಮ್ಜೆ 3311 ನಂಬರ್ನ ಈ ಕಾರು ಬಿಟಿಎಂ ಬಡಾವಣೆ ನಿವಾಸಿ ಪದ್ಮ ಎಂಬವರ ಹೆಸರಿನಲ್ಲಿ ನೋಂದಣಿಯಾಗಿದೆ. ಕಾರಿನಲ್ಲಿ ಸಾಕಷ್ಟು ದಾಖಲೆಗಳಿವೆ. ಘಟನೆ ಹಿನ್ನೆಲೆ ಕುರಿತ ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.