ವಾರದೊಳಗೇ ಅರ್ಧಕ್ಕರ್ಧ ಕಡಿಮೆ ಆಯ್ತು ರಾಜ್ಯದಲ್ಲಿನ ಕರೊನಾ ಸಕ್ರಿಯ ಪ್ರಕರಣ

Corona
Published on

ಬೆಂಗಳೂರು: ಕರೊನಾ ಹಾವಳಿ ತಗ್ಗುವುದರೊಂದಿಗೆ ಹಂತ-ಹಂತವಾಗಿ ನಡೆದ ಅನ್​​ಲಾಕ್ ಬೆನ್ನಿಗೇ ಇದೀಗ ಮತ್ತೊಂದು ಸಮಾಧಾನದ ಸಂಗತಿ ಕಂಡುಬಂದಿದೆ. ರಾಜ್ಯದಲ್ಲಿನ ಕರೊನಾ ಸಕ್ರಿಯ ಪ್ರಕರಣ ಒಂದು ವಾರದೊಳಗೇ ಅರ್ಧಕ್ಕರ್ಧದಷ್ಟು ಕಡಿಮೆಯಾಗಿದೆ.

ಇಂದಿನ ಕರೊನಾ ಬುಲೆಟಿನ್ ಪ್ರಕಾರ, ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 2,984 ಕೋವಿಡ್​-19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಮತ್ತೊಂದೆಡೆ ಇದೇ ಅವಧಿಯಲ್ಲಿ 14,337 ಮಂದಿ ಕರೊನಾ ಸೋಂಕಿನಿಂದ ಮುಕ್ತರಾಗಿ ಆಸ್ಪತ್ರೆ ಹಾಗೂ ಕೋವಿಡ್​ ಆರೈಕೆ ಕೇಂದ್ರಗಳಿಂದ ಬಿಡುಗಡೆಗೊಂಡಿದ್ದಾರೆ. ಅದಾಗ್ಯೂ 53,871 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿದ್ದು, ಕಳೆದ 24 ಗಂಟೆಗಳಲ್ಲಿ 88 ಮಂದಿ ಕೋವಿಡ್​ಗೆ ಬಲಿಯಾಗಿದ್ದಾರೆ. ಈ ಮೂಲಕ ಇದುವರೆಗೆ 35,222 ಮಂದಿ ಕರೊನಾದಿಂದಾಗಿ ಮೃತಪಟ್ಟಂತಾಗಿದೆ.

ರಾಜ್ಯದಲ್ಲಿ ಇದುವರೆಗೆ 28,49,997 ಮಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದು, ಆ ಪೈಕಿ 27,60,881 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಇನ್ನು ಐದು ದಿನಗಳ ಹಿಂದೆ ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 28,34,630 ಆಗಿದ್ದು, ಗುಣಮುಖರ ಒಟ್ಟು ಸಂಖ್ಯೆ 26,98,822 ಇದ್ದು, ಸಕ್ರಿಯ ಪ್ರಕರಣಗಳ 1,01,042 ಇತ್ತು. ಆದರೆ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 53,871 ಆಗಿದ್ದು, ಒಂದು ವಾರದೊಳಗೇ ಸುಮಾರು ಅರ್ಧಕ್ಕರ್ಧದಷ್ಟು ಕಡಿಮೆ ಆದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net