

ಲಂಡನ್: ಸದ್ಯ ಕರೊನಾ ಲಸಿಕೆ ಸಂಶೋಧನೆಯಲ್ಲಿ ತೊಡಗಿರುವ ದೇಶಗಳ ಪೈಕಿ ಯುನೈಟೆಡ್ ಕಿಂಗಡಂ ಮುಂಚೂಣಿಯಲ್ಲಿದೆ. ಇಲ್ಲಿನ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ತಂಡ ಕೋತಿಗ ಮೇಲೆ ನಡೆಸಿದ ಪ್ರಯೋಗ ಯಶಸ್ವಿಯಾಗಿದೆ. ಜತೆಗೆ ಸೆಪ್ಟೆಂಬರ್ನಲ್ಲಿ ಲಸಿಕೆ ಸಿದ್ಧವಾಗಲಿದೆ ಎಂದು ಸಂಶೋಧನಾ ತಂಡವೇ ಘೋಷಿಸಿದೆ. ಆದರೆ, ಪ್ರಧಾನಿ ಬೊರಿಸ್ ಜಾನ್ಸನ್ ಹೇಳುತ್ತಿರೋದೇ ಬೇರೆ..
ಲಾಕ್ಡೌನ್ ನಿಯಮಗಳ ಸಡಿಲಿಕೆ ಕುರಿತು ಗೊಂದಲಕಾರಿ ಹೇಳಿಕೆ ನೀಡಿದ್ದಕ್ಕಾಗಿ ಬೊರಿಸ್ ಜಾನ್ಸನ್ ಭಾರಿ ಟೀಕೆಗೆಗೆ ಒಳಗಾಗಿದ್ದಾರೆ. ಈ ನಡುವೆ, ಕರೊನಾ ವೈರಸ್ ತಡೆಗೆ ಸಂಶೋಧಿಸಲಾಗುತ್ತಿರುವ ಲಸಿಕೆ ಫಲಪ್ರದವಾಗದೇ ಇರಬಹುದು ಎಂದು ಹೇಳಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.
ಆಕ್ಸ್ಫರ್ಡ್ ಲಸಿಕೆಗಳು ಕ್ಲಿನಿಕಲ್ ಟ್ರಯಲ್ ಹಂತದಲ್ಲಿದ್ದರೂ, ಲಸಿಕೆ ಸಜ್ಜಾಗಲು ಭಾರಿ ಸಮಯಾವಕಾಶ ಬೇಕಾಗುತ್ತದೆ. ಪ್ರಸ್ತುತ ಲಸಿಕೆ ತಯಾರಿಕೆಯ ಜಾಗತಿಕ ಪೈಪೋಟಿಯಲ್ಲಿ ನಾವು ಭಾರಿ ಮುಂದಿದ್ದೇವೆ. ಈ ನಿಟ್ಟಿನಲ್ಲಿ ಅತ್ಯಂತ ಭರವಸೆದಾಯಕ ಸಂಶೋಧನೆಗಳು ನಮ್ಮಲ್ಲಿಯೇ ನಡೆಯುತ್ತಿವೆ. ಲಸಿಕೆಯನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲು 854 ಕೋಟಿ ರೂ. ವೆಚ್ಚದಲ್ಲಿ ಕಾರ್ಖಾನೆಯನ್ನು ಸ್ಥಾಪಿಸಲಾಗುತ್ತಿದೆ. ಇದರಲ್ಲಿಯೂ ನಿಗದಿತ ಕಾಲಾವಧಿಗಿಂತ ನಾವು 12 ತಿಂಗಳು ಮುಂದಿದ್ದೇವೆ ಎಂದು ಬೊರಿಸ್ ಹೇಳಿದ್ದಾರೆ.
ಯುನೈಟೆಡ್ ಕಿಂಗ್ಡಂನ ಎಲ್ಲ ಜನರಿಗೂ ಕೇವಲ ಆರು ತಿಂಗಳಲ್ಲಿ ಇಲ್ಲಿ ಲಸಿಕೆಯನ್ನು ತಯಾರಿಸಲಾಗುತ್ತದೆ. 2021ರಲ್ಲಿ ಕಾರ್ಯಾರಂಭಿಸಲು ಅನುಕೂಲವಾಗುವಂತೆ ಹಣಕಾಸಿನ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದ್ದಾರೆ.
ಈ ಔಷಧ ತಯಾರಿಕಾ ಘಟಕ ಆಕ್ಸ್ಫರ್ಡ್ಶೈರ್ನಲ್ಲಿ ನಿರ್ಮಾಣವಾಗಲಿದೆ. ಅಲ್ಲದೇ, ಯುನೈಟೆಡ್ನ ಕಿಂಗಂಡಂನ ಮೊದಲ ಲಾಭರಹಿತ ಸಂಸ್ಥೆಯಾಗಿರಲಿದೆ. ಈ ಘಟಕದಲ್ಲಿ ಇತರ ವೈರಸ್ಜನ್ಯ ಕಾಯಿಲೆಗಳಿಗೂ ಔಷಧ ತಯಾರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇಷ್ಟೆಲ್ಲ ಆದರೂ, ಲಸಿಕೆ ಫಲಪ್ರದವಾಗುವ ಬಗ್ಗೆ ಬೊರಿಸ್ ಜಾನ್ಸನ್ ಅನುಮಾನ ವ್ಯಕ್ತಪಡಿಸಿದ್ದೇಕೆ ಎಂಬುದು ನಿಗೂಢವಾಗಿದೆ.