

ನವದೆಹಲಿ: ಭಾರತದಲ್ಲಿ ಒಂದು ಲಕ್ಷ ಜನರಿಗೆ ಒಬ್ಬರು ಕರೊನಾ ಸೋಂಕಿನಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಈ ಪ್ರಮಾಣ 6.04 ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಬ್ರಿಟನ್ನಲ್ಲಿ ಲಕ್ಷಕ್ಕೆ 63.13 ಜನರು ಸಾವನ್ನಪ್ಪುತ್ತಿದ್ದಾರೆ. ಸ್ಪೇನ್ನಲ್ಲಿ 60.60, ಇಟಲಿಯಲ್ಲಿ 57.19, ಅಮೆರಿಕದಲ್ಲಿ 36.30, ಜರ್ಮನಿಯಲ್ಲಿ 27.32, ಬ್ರೆಜಿಲ್ನಲ್ಲಿ 23.68 ಮತ್ತು ರಷ್ಯಾದಲ್ಲಿ ಲಕ್ಷಕ್ಕೆ 5.62 ಜನರು ಸೋಂಕಿನಿಂದಾಗಿ ಮೃತರಾಗುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ಲಕ್ಷಕ್ಕೆ ಕೇವಲ ಒಬ್ಬರು ಮೃತರಾಗುತ್ತಿದ್ದಾರೆ. ಇದುವರೆಗೆ ದೇಶದಲ್ಲಿ 14 ಸಾವಿರಕ್ಕೂ ಹೆಚ್ಚು ಜನರು ಮೃತರಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
3 ದಿನಗಳ ನಂತರ ಇಳಿಮುಖ: ದೇಶದಲ್ಲಿ ಸೋಮವಾರ 13,500ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಸತತ ಎರಡು ದಿನಗಳ ಕಾಲ 15 ಸಾವಿರ ದಾಟಿದ್ದ ಸೋಂಕು ಮಂಗಳವಾರ ಕೊಂಚ ಇಳಿಮುಖ ವಾಗಿತ್ತು. ಹಾಗಿದ್ದರೂ ಏಕದಿನ ಏರಿಕೆಯಲ್ಲಿ ಭಾರತ 3ನೇ ಸ್ಥಾನದಲ್ಲೇ ಕಾಣಿಸಿಕೊಂಡಿದೆ. ಏಕದಿನ ಏರಿಕೆ ಪಟ್ಟಿಯಲ್ಲಿ 31 ಸಾವಿರ ಹೊಸ ಪ್ರಕರಣಗಳೊಂದಿಗೆ ಅಮೆರಿಕ 1ನೇ ಸ್ಥಾನ ಮತ್ತು 24 ಸಾವಿರ ಪ್ರಕರಣಗಳೊಂದಿಗೆ ಬ್ರೆಜಿಲ್ 2ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.
ಇದನ್ನೂ ಓದಿ: ಮತ್ತೆ 20 ದಿನ ದೇಶಾದ್ಯಂತ ಕಂಪ್ಲೀಟ್ ಲಾಕ್ಡೌನ್?
ಲಾಕ್ಡೌನ್ ಸಮಯದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ ಯಲ್ಲಿ ಅನುದಾನಕ್ಕಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆಯಲ್ಲಿ ಶೇ. 51 ಇಳಿಕೆ ಕಂಡುಬಂದಿದೆ ಎಂದು ತಜ್ಞರ ತಂಡ ತಿಳಿಸಿದೆ. ಆತ್ಮ ನಿರ್ಭರ ಭಾರತ ಆರ್ಥಿಕ ಪ್ಯಾಕೇಜ್ ಘೊಷಣೆಯಾದಗಿನಿಂದ ಜೂನ್ 20ರವರೆಗೆ 79 ಸಾವಿರ ಕೋಟಿ ರೂಪಾಯಿಯನ್ನು ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್ಎಂಇ) ಸಾಲದ ರೂಪದಲ್ಲಿ ನೀಡಲಾಗಿದೆ. ಪುರಿ ಜಗನ್ನಾಥ ದೇವಾಲಯದ ಸಿಬ್ಬಂದಿಯೊಬ್ಬರಿಗೆ ಕರೊನಾ ಪಾಸಿಟಿವ್ ತೋರಿಸಿದೆ. ರಥೋತ್ಸವ ನಡೆಸಲು ಸುಪ್ರೀಂಕೋರ್ಟ್ ಷರತ್ತುಬದ್ಧ ಅನುಮತಿ ನೀಡಿರುವ ಹಿನ್ನೆಲೆ ದೇವಸ್ಥಾನದ ಎಲ್ಲ ಸಿಬ್ಬಂದಿ ಮತ್ತು ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸ್ ಸಿಬ್ಬಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಪಿಎಂ ಕೇರ್ಸ್ನಿಂದ 50 ಸಾವಿರ ವೆಂಟಿಲೇಟರ್: ಪ್ರಧಾನ ಮಂತ್ರಿ ಪರಿಹಾರ ನಿಧಿ (ಪಿಎಂ ಕೇರ್ಸ್)ಯಿಂದ 2 ಸಾವಿರ ಕೋಟಿ ರೂಪಾಯಿಯನ್ನು 50 ಸಾವಿರ ಮೇಡ್ ಇನ್ ಇಂಡಿಯಾ ವೆಂಟಿಲೇಟರ್ಗಳ ಖರೀದಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ದೇಶದ ವಲಸೆ ಕಾರ್ವಿುಕರಿಗಾಗಿ ಹೆಚ್ಚುವರಿ 1 ಒಂದು ಸಾವಿರ ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿರುವುದಾಗಿ ಕೇಂದ್ರ ತಿಳಿಸಿದೆ. 50 ಸಾವಿರ ವೆಂಟಿಲೇಟರ್ ಪೈಕಿ 30 ಸಾವಿರ ವೆಂಟಿಲೇಟರ್ಗಳನ್ನು ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ತಯಾರಿಸಿದೆ. ಉಳಿದಂತೆ ಎಜಿವಿಎ ಹೆಲ್ತ್ ಕೇರ್ (10 ಸಾವಿರ), ಎಎಂಟಿಜೆಡ್ ಬೇಸಿಕ್ (5,650), ಎಎಂಟಿಜೆಡ್ ಹೈ ಎಂಡ್ (4 ಸಾವಿರ) ಮತ್ತು ಅಲೈಡ್ ಮೆಡಿಕಲ್ (350) ಸಂಸ್ಥೆಗಳು ವೆಂಟಿಲೇಟರ್ ತಯಾರಿಸಿವೆ. ಈಗಾಗಲೇ 2,923 ವೆಂಟಿಲೇಟರ್ಗಳು ಸಿದ್ಧವಿದ್ದು ಅದರಲ್ಲಿ 1,340 ವೆಂಟಿಲೇಟರ್ಗಳನ್ನು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಲಾಗಿದೆ. ಮಹಾರಾಷ್ಟ್ರಕ್ಕೆ 275, ದೆಹಲಿ 275, ಗುಜರಾತ್ಗೆ 175, ಬಿಹಾರಕ್ಕೆ 100, ಕರ್ನಾಟಕಕ್ಕೆ 90, ರಾಜಸ್ಥಾನಕ್ಕೆ 75 ವೆಂಟಿಲೇಟರ್ಗಳನ್ನು ಕಳುಹಿಸಿಕೊಡಲಾಗಿದೆ ಎಂದು ಕೇಂದ್ರ ಮಾಹಿತಿ ನೀಡಿದೆ.
ಕೇರಳದಲ್ಲಿ ಕರೊನಾಕ್ಕೆ ಇನ್ನೋರ್ವ ಬಲಿ: ಕೇರಳದಲ್ಲಿ ಕರೊನಾಕ್ಕೆ ಇನ್ನೊಂದು ಜೀವ ಬಲಿಯಾಗಿದೆ. ಕೊಲ್ಲಂ ಮಯ್ಯನಾಡ್ ನಿವಾಸಿ ವಸಂತ ಕುಮಾರ್(68) ಮಂಗಳವಾರ ಮೃತಪಟ್ಟಿದ್ದಾರೆ. ಜೂನ್ 8ರಂದು ದೆಹಲಿಯಿಂದ ಆಗಮಿಸಿದ್ದ ವಸಂತಕುಮಾರ್ ಮನೆಯಲ್ಲಿ ಕ್ವಾರಂಟೈನ್ನಲ್ಲಿದ್ದರು. ಪಾರಿಪಳ್ಳಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೇರಳದಲ್ಲಿ ಕರೊನಾದಿಂದ ಮೃತಪಟ್ಟವರ ಸಂಖ್ಯೆ ಈ ಮೂಲಕ 22ಕ್ಕೆ ಏರಿದೆ.