110 ದಿನಕ್ಕೆ 1 ಲಕ್ಷ, 49 ದಿನಕ್ಕೆ 7 ಲಕ್ಷ!: ಭಾರತಲ್ಲಿ ಹತೋಟಿ ಮೀರುತ್ತಿರುವ ಸೋಂಕು

Corona Positive Case - Copy
Published on

ನವದೆಹಲಿ: ಭಾರತದಲ್ಲಿ ಕರೊನಾ ಅಟ್ಟಹಾಸ ಮೇರೆಮೀರಿದ್ದು, 49 ದಿನದಲ್ಲಿ 6 ಲಕ್ಷ ಪ್ರಕರಣಗಳು ವರದಿಯಾಗಿವೆ. ಕಳೆದ ಫೆಬ್ರವರಿ 15ರಿಂದ ಆರಂಭವಾದ ಸೋಂಕು ಪ್ರಕರಣಕ್ಕೆ ಒಂದು ಲಕ್ಷದ ಗಡಿ ಮುಟ್ಟಲು 110 ದಿನಗಳ ಸಮಯ ಹಿಡಿದಿತ್ತು. ಆದರೆ ಈ ಸಂಖ್ಯೆ ಕೇವಲ 49 ದಿನಗಳಲ್ಲಿ 1 ಲಕ್ಷದಿಂದ 7 ಲಕ್ಷಕ್ಕೆ ಏರಿಕೆಯಾಗಿದೆ. ಸುಮಾರು 10 ದಿನಗಳಿಂದಲೂ ಪ್ರತಿದಿನ 20 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಪ್ರಮುಖ ಅಂಶಗಳು ಕೇಂದ್ರ ಮತ್ತು ಪಶ್ಚಿಮ ರೈಲ್ವೆ ವಲಯದ 872 ಉದ್ಯೋಗಿಗಳು, ಅವರ ಕುಟುಂಬಸ್ಥರಿಗೆ ಕರೊನಾ ಸೋಂಕು ತಗುಲಿದೆ. ಅದರಲ್ಲಿ 86 ಮಂದಿ ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಗರ್ಭಿಣಿಯೊಬ್ಬರಿಗೆ ಕರೊನಾ ಪರೀಕ್ಷೆ ಮಾಡಿಸಲು ಸರತಿ ಸಾಲಿನಲ್ಲಿ ನಿಂತಿದ್ದಾಲೇ ಹೆರಿಗೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ದೇಶದಲ್ಲಿ ಕರೊನಾ ಪರಿಸ್ಥತಿ ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಶಿವಸೇನೆ ಟೀಕಿಸಿದೆ. 21 ದಿನಗಳಲ್ಲಿ ಕರೊನಾ ಗೆಲ್ಲುವುದಾಗಿ ಪ್ರಧಾನಿ ಹೇಳಿದ್ದರು, ಆದರೆ 100 ದಿನವಾದರೂ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಲೇ ಇದೆ ಎಂದು ‘ಸಾಮ್ನಾ’ದಲ್ಲಿ ಟೀಕಿಸಿದೆ. ದುಬೈನಿಂದ ಕೇರಳಕ್ಕೆ ಮರಳಿದ್ದ 24 ವರ್ಷದ ಯುವಕನೊಬ್ಬ ಕರೊನಾಗೆ ಬಲಿಯಾಗಿದ್ದಾನೆ. ಪಶ್ಚಿಮ ಬಂಗಾಳದ ಉತ್ತರ 24 ಪರಂಗಣ ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ 14 ದಿನಗಳ ಕಾಲ ಮತ್ತೆ ಲಾಕ್​ಡೌನ್ ವಿಧಿಸಲು ಚಿಂತನೆ ನಡೆಸಿದೆ.

ಕಳೆದ 24 ತಾಸಿನಲ್ಲಿ 14 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 7.34 ಲಕ್ಷಕ್ಕೆ ಏರಿಕೆಯಾಗಿದೆ. ಇದರ ಜತೆಗೆ ಸಾವಿನ ಸಂಖ್ಯೆಯೂ ವೇಗವಾಗಿ ಏರುತ್ತಿದೆ. 373 ಹೊಸ ಸಾವು ಸಂಭವಿಸಿದ್ದು, ಒಟ್ಟು ಮೃತರ ಸಂಖ್ಯೆ 20.547ಕ್ಕೆ ಏರಿದೆ. ಈವರೆಗೆ 4.52 ಲಕ್ಷ ರೋಗಿಗಳು ಗುಣಮುಖರಾಗಿದ್ದು, ಇನ್ನೂ 2.62 ಲಕ್ಷ ಸಕ್ರಿಯ ಪ್ರಕರಣಗಳಿವೆ. ದೇಶದಲ್ಲಿ ಸದ್ಯ ಕರೊನಾ ರೋಗಿಗಳ ಮರಣ ಪ್ರಮಾಣ ಶೇಕಡ 2.8 ಇದ್ದು, ಗುಣಮುಖರ ಪ್ರಮಾಣ ಶೇಕಡ 61.13 ಇದೆ. ಪ್ರತಿದಿನ ಸರಾಸರಿ 450 ಮಂದಿ ಕರೊನಾಗೆ ಬಲಿಯಾಗುತ್ತಿದ್ದಾರೆ. ಕರೊನಾ ವೈದ್ಯಕೀಯ ಪರೀಕ್ಷೆಯ ಲ್ಯಾಬ್​ಗಳ ಸಂಖ್ಯೆಯನ್ನು ಈಗ 1,115ಕ್ಕೆ ಏರಿಸಲಾಗಿದ್ದು, ಈವರೆಗೆ 1 ಕೋಟಿಗೂ ಅಧಿಕ ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಅಮೆರಿಕದಲ್ಲಿ 30 ಲಕ್ಷ ಸೋಂಕು: ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 30 ಲಕ್ಷದ ಗಡಿ ದಾಟಿದೆ. ಸೋಮವಾರ 50,500 ಹೊಸ ಪ್ರಕರಣಗಳು ಬೆಳಕಿಗೆ ಬರುವುದರೊಂದಿಗೆ ಸೋಂಕಿತರ ಸಂಖ್ಯೆ 30.40 ಲಕ್ಷಕ್ಕೆ ಏರಿದೆ. ಅಂದರೆ ಜಾಗತಿಕವಾಗಿ ವರದಿಯಾಗಿರುವ ಒಟ್ಟು ಪ್ರಕರಣಗಳಲ್ಲಿ ಶೇಕಡ 30 ರಷ್ಟು ಪ್ರಕರಣಗಳನ್ನು ಅಮೆರಿಕ ಹೊಂದಿದೆ. ಈವರೆಗೆ ಅಲ್ಲಿ 1.32 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ನಂತರದ ಸ್ಥಾನದಲ್ಲಿರುವ ಬ್ರೆಜಿಲ್​ನಲ್ಲಿ 65 ಸಾವಿರಕ್ಕೂ ಹೆಚ್ಚು ಸಾವು ಸಂಭವಿಸಿದ್ದು, 16 ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಜಾಗತಿಕವಾಗಿ ಈವರೆಗೆ ಒಟ್ಟು 5.40 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 1.17 ಕೋಟಿ ಮಂದಿ ಸೋಂಕಿಗೆ ಒಳಗಾಗಿದ್ದಾರೆ.

ಚೀನಾ ಹಿಂದಿಕ್ಕಿದ ಮುಂಬೈ: ಕರೊನಾ ಸೋಂಕು ಹಾಗೂ ಸಾವು ಪ್ರಕರಣದಲ್ಲಿ ಮುಂಬೈ ನಗರ ಚೀನಾವನ್ನೂ ಹಿಂದಿಕ್ಕಿದೆ. ಚೀನಾದಲ್ಲಿ ಈವರೆಗೆ 4,634 ಮಂದಿ ಕರೊನಾಗೆ ಬಲಿಯಾಗಿದ್ದು, ಒಟ್ಟು 83,565 ಪ್ರಕರಣಗಳು ವರದಿಯಾಗಿವೆ. ಆದರೆ, ಮುಂಬೈನಲ್ಲಿ ಈವರೆಗೆ 4,938 ಮಂದಿ ಸಾವನ್ನಪ್ಪಿದ್ದು, 85 ಸಾವಿರಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬಂದಿವೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಈಗಾಗಲೇ 2 ಲಕ್ಷದ ಗಡಿ ದಾಟಿದ್ದು, ದೇಶದಲ್ಲಿ ಕರೊನಾಗೆ ಅತೀ ಬಾಧಿತವಾಗಿರುವ ಪ್ರಮುಖ ರಾಜ್ಯವಾಗಿದೆ.

ಹಲವು ದೇಶಗಳಲ್ಲಿ 2ನೇ ಲಾಕ್​ಡೌನ್: ಕರೊನಾ ವೈರಸ್​ನ ಎರಡನೇ ಅಲೆ ಭೀತಿ ಹಿನ್ನೆಲೆ ವಿಶ್ವದ ಹಲವು ದೇಶಗಳಲ್ಲಿ ಎರಡನೇ ಬಾರಿಗೆ ಮತ್ತೆ ಲಾಕ್​ಡೌನ್ ವಿಧಿಸಲಾಗುತ್ತಿದೆ. ಸ್ಪೇನ್​ನ ಗಲಿಸಿಯಾ ಪ್ರದೇಶದಲ್ಲಿ ಮತ್ತೆ ಲಾಕ್​ಡೌನ್ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಸುಮಾರು 70 ಸಾವಿರ ಮಂದಿಗೆ ಮನೆಯಿಂದ ಹೊರಗೆ ಬರದಂತೆ ನಿರ್ಬಂಧ ವಿಧಿಸಲಾಗಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್​ನಲ್ಲಿಯೂ ಇದೇ ರೀತಿ ಲಾಕ್​ಡೌನ್ ವಿಧಿಸಲಾಗಿದೆ. ಇಸ್ರೇಲ್​ನಲ್ಲಿ ಭಾನುವಾರು 977 ಹೊಸ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆ ಕರೊನಾದ ಎರಡನೇ ಅಲೆಯ ಭೀತಿ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net