

ನವದೆಹಲಿ: ಕೋವಿಡ್ 19 ಸೋಂಕಿನ ಸಂಕಷ್ಟಕ್ಕೆ ಒಳಗಾಗಿ ಅಮೆರಿಕದಲ್ಲಿ ಸಿಲುಕಿದ್ದ 200 ಉದ್ಯೋಗಿಗಳು ಮತ್ತು ಅವರ ಕುಟುಂಬದವರನ್ನು ಪ್ರತಿಷ್ಠಿತ ಐಟಿ ಕಂಪನಿ ಇನ್ಪೋಸಿಸ್ ಭಾರತಕ್ಕೆ ಕರೆಯಿಸಿಕೊಂಡಿದೆ. ಇದಕ್ಕಾಗಿ ವಿಶೇಷ ಚಾರ್ಟೆಡ್ ವಿಮಾನದ ವ್ಯವಸ್ಥೆ ಮಾಡಿದ ಕಂಪನಿ, ಉದ್ಯೋಗಿಗಳ ಸುರಕ್ಷಿತ ವಾಪಸಾತಿಯನ್ನು ಖಾತರಿಗೊಳಿಸಿದೆ.
ಅಮೆರಿಕದ ಸ್ಯಾನ್ಫ್ರಾನ್ಸಿಸ್ಕೋದಿಂದ ಇನ್ಪೋಸಿಸ್ನ ನೂರಾರು ಉದ್ಯೋಗಿಗಳು ಹಾಗೂ ಅವರ ಕುಟುಂಸ್ಥರನ್ನು ಹೊತ್ತು ವಿಶೇಷ ವಿಮಾನ ಸೋಮವಾರ ಬೆಳಗ್ಗೆ ಬೆಂಗಳೂರಿಗೆ ತಲುಪಿದೆ ಎಂದು ಇನ್ಪೋಸಿಸ್ನ ಸಿಪಿಜಿ ಮತ್ತು ಲಾಜಿಸ್ಟಿಕ್ಸ್ನ ಅಸೋಸಿಯೇಟ್ ಉಪಾಧ್ಯಕ್ಷ ಸಮೀರ್ ಗೋಸಾವಿ ತಿಳಿಸಿದ್ದಾರೆ.
ಈ ವಿಮಾನದಲ್ಲಿ ಇನ್ಪೋಸಿಸ್ ಉದ್ಯೋಗಿಗಳ ಜತೆಗೆ 206 ಅನ್ಯ ಪ್ರಯಾಣಿಕರು ಕೂಡ ಇದ್ದರು. ಇವರೆಲ್ಲ ಕರೊನಾ ಬಿಕ್ಕಟ್ಟಿನಿಂದಾಗಿ ಅಮೆರಿಕದಲ್ಲಿ ಸಿಲುಕಿದ್ದರು. ಇನ್ಪೋಸಿಸ್ನ ಉದ್ಯೋಗಿಗಳಲ್ಲಿ ಕೆಲವರು ಅಲ್ಲೇ ಕೆಲಸ ನಿರ್ವಹಿಸುವವರಾಗಿದ್ದು, ಇನ್ನೂ ಕೆಲವರು ಪ್ರಾಜೆಕ್ಟ್ ಹಾಗೂ ಸಭೆಗಳಿಗಾಗಿ ಅಮೆರಿಕಕ್ಕೆ ತೆರಳಿ ಅಲ್ಲಿ ಸಿಲುಕಿಕೊಂಡಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ. 2020ರ ಮಾರ್ಚ್ಗೆ ಅಂತ್ಯವಾದ ಹಣಕಾಸು ವರ್ಷದಲ್ಲಿ ಇನ್ಪೋಸಿಸ್ಗೆ ಶೇಕಡಾ 60 ರಷ್ಟು ಆದಾಯ ಅಮೆರಿಕದಿಂದಲೇ ಬಂದಿದೆ. (ಏಜೆನ್ಸೀಸ್)