

ಬೆಂಗಳೂರು: ಕರೊನಾ ನಿರ್ವಹಣೆ ವಿಚಾರದಲ್ಲಿ ಸಚಿವರ ನಡುವಿನ ಸಮನ್ವಯದ ಕೊರತೆ ಮತ್ತು ಅಧಿಕಾರಿಗಳ ಅಸಹಕಾರದಿಂದಾಗಿ ಹದಗೆಟ್ಟಿರುವ ವ್ಯವಸ್ಥೆಯನ್ನು ಹಳಿಮೇಲೆ ತರಲು ಹರಸಾಹಸ ಪಡುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಎಲ್ಲ ಗೊಂದಲ ನಿವಾರಣೆಗೆ ಕನಿಷ್ಠ ಕಾಲಮಿತಿಯ ಗಡುವು ವಿಧಿಸಿದ್ದಾರೆ.
ಬುಧವಾರ ಬೆಳಗ್ಗೆ ಸಚಿವರು ಮತ್ತು ಅಧಿಕಾರಿಗಳ ನ್ನೊಳಗೊಂಡ ಉನ್ನತ ಮಟ್ಟದ ಸಭೆ ನಡೆಸಿದ ಅವರು, ಇದು ಕೈಕಟ್ಟಿ ಕೂರುವ ಸಮಯವಲ್ಲ. ಸಮನ್ವಯ ಸರಿ ಮಾಡಿಕೊಳ್ಳಲೇಬೇಕೆಂದು ತಾಕೀತು ಮಾಡಿದ್ದಾರೆ. ಸಿಎಂ ಸೂಚನೆ ಮೇರೆಗೆ ‘ಕೋವಿಡ್ ಪರೀಕ್ಷೆ- ಲ್ಯಾಬ್- ಸೋಂಕಿತರ ವರ್ಗಾವಣೆ- ಆಂಬುಲೆನ್ಸ್- ಕೋವಿಡ್ ಕೇರ್ ಅಥವಾ ಆಸ್ಪತ್ರೆ’ ನಡುವೆ ಒಂದೇ ವೇದಿಕೆಯಲ್ಲಿ ಸಮನ್ವಯ ಸಾಧಿಸಲು ಆರೋಗ್ಯ ಇಲಾಖೆಯ ವಾರ್ ರೂಂ ಬಳಸಿಕೊಳ್ಳಲಾಗುತ್ತದೆ. ಜತೆಗೆ ಪ್ರತಿ ರೋಗಿಯನ್ನು ವಾರ್ ರೂಂ ಮೂಲಕವೇ ಗಮನಿಸುವ ಮತ್ತು ನಿರ್ವಹಿಸುವ ವ್ಯವಸ್ಥೆ ಜಾರಿ ಮಾಡಲಾಗುತ್ತದೆ. ಈ ಪದ್ಧತಿಯನ್ನು ಜಾರಿಗೆ ತರಲು ಎರಡು ದಿನಗಳ ಕಾಲಾವಕಾಶ ನಿಗದಿ ಮಾಡಲಾಗಿದೆ.
ಸಭೆಯ ನಿರ್ಧಾರಗಳು ಸೋಂಕಿನ ಲಕ್ಷಣ ಇಲ್ಲದವರನ್ನು ಕರೆದೊಯ್ಯಲು ಟೆಂಪೋಟ್ರಾವಲರ್ಗಳ ಬಳಕೆ ಮೆಡಿಕಲ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಸಮ್ಮತಿ ಕೋವಿಡ್ ಕೇರ್ ಸೆಂಟರ್ನಲ್ಲಿ ಎದುರಾಗಬಹುದಾದ ಸವಾಲಿನ ಬಗ್ಗೆ ಚರ್ಚೆ ಕೇರ್ ಸೆಂಟರ್ನಲ್ಲಿ ಭದ್ರತೆಗೆ ಮಾರ್ಷಲ್ಗಳ ಬಳಕೆ 3 ಪಾಳಿಗಳಲ್ಲಿ ಒಂದೂವರೆ ಸಾವಿರ ವೈದ್ಯರು, ನರ್ಸ್
ಮಂಗಳವಾರವಷ್ಟೇ ಕೇಂದ್ರ ತಂಡದ ಜತೆಗೆ ಸಭೆ ನಡೆಸಿದ್ದ ರಾಜ್ಯ ಸರ್ಕಾರ ಹಲವು ವಿಚಾರಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿತ್ತು. ಕೇಂದ್ರದಿಂದಲೂ ಕೆಲವು ಎಚ್ಚರಿಕೆ ಸಂದೇಶಗಳನ್ನು ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ತುರ್ತು ಸಭೆ ಆಯೋಜನೆಗೊಂಡಿತ್ತು. ಸಚಿವರು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಿದ್ದರ ಜೊತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಖುದ್ದು ಕೋವಿಡ್ ಕೇರ್ ಸೆಂಟರ್ಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಲೋಪ ದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಆರೋಗ್ಯ ಸಚಿವ, ವೈದ್ಯಕೀಯ ಶಿಕ್ಷಣ ಸಚಿವ ಮತ್ತು ಅಧಿಕಾರಿಗಳ ಜತೆ ಸಭೆಯಲ್ಲಿ ಗಂಭೀರವಾಗಿ ಚರ್ಚೆ ನಡೆಸಿದ ಸಿಎಂ, ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಇನ್ನಷ್ಟು ಬಿಗಿ ಕ್ರಮಗಳನ್ನು ತೆಗೆದುಕೊಳ್ಳುವಂತೆಯೂ ಸೂಚಿಸಿದ್ದಾರೆ. ಸೋಂಕಿತರ ಆರೋಗ್ಯ ತಪಾಸಣೆಗೆ ಹೆಚ್ಚಿನ ನಿಗಾ, ಲ್ಯಾಬ್ ನಿರ್ವಹಣೆ ಮತ್ತು ಕೇಂದ್ರ ಕೇರ್ ಸೆಂಟರ್ ನಡುವೆ ಸಮನ್ವಯತೆಗೆ ಡ್ಯಾಶ್ ಬೋರ್ಡ್ ಬಳಸುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೈದ್ಯಕೀಯ ಸಚಿವ ಡಾ.ಸುಧಾಕರ್, ಕೋವಿಡ್ ಕೇರ್ ಸೆಂಟರ್ ಗಳಲ್ಲಿ ರೋಗಿಗಳಿಗೆ ಕಲ್ಪಿಸಿರುವ ವ್ಯವಸ್ಥೆ, ಆಂಬುಲೆನ್ಸ್ ಪರಿಸ್ಥಿತಿ, ಆಸ್ಪತ್ರೆ ಸ್ಥಿತಿಗತಿ ಬಗ್ಗೆ ಸಿಎಂ ಚರ್ಚೆ ನಡೆಸಿದರು. ಗುರುವಾರ ಅವರು ಕೋವಿಡ್ ಕೇರ್ ಸೆಂಟರ್ಗೆ ಭೇಟಿಕೊಟ್ಟು ಪರಿಶೀಲನೆ ನಡೆಸುವರು ಎಂದರು. ಬೆಂಗಳೂರಿನಲ್ಲಿ 200 ಹೆಚ್ಚುವರಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು, ಆದರೆ, 500 ಸಂಖ್ಯೆಯಲ್ಲಿ ಇರಬೇಕೆಂದು ಸಿಎಂ ತಿಳಿಸಿದ್ದು, ಈ ಕೂಡಲೇ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಸೋಂಕು ಹೆಚ್ಚಳದ ಬಗ್ಗೆ ಚರ್ಚೆ: ನವೆಂಬರ್ ವೇಳೆಗೆ ಬೆಂಗಳೂರಿನಲ್ಲಿ ಸೋಂಕು ಹೆಚ್ಚಾಗುವ ವಿಚಾರದ ಬಗ್ಗೆ ಚರ್ಚೆ ಮಾಡಲಾಗಿದೆ. ಸೋಂಕು ಹೆಚ್ಚಳವಾಗುವುದು ಅಧಿಕಾರಿಗಳಿಗೆ ಗೊತ್ತಾಗಲ್ಲ, ಪರಿಣತರು ಕಾಲಕಾಲಕ್ಕೆ ಸಲಹೆ ಕೊಡುತ್ತಾರೆ. ಸರ್ಕಾರ ಪರಿಣತರ ಜತೆ ನಿರಂತರ ಸಮಾಲೋಚನೆ ಮಾಡುತ್ತಿದೆ. ಅದರ ಆಧಾರದಲ್ಲಿ ಹಂತಹಂತವಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಬೆಂಗಳೂರಿನಲ್ಲಿ ಸೋಂಕು ಹೆಚ್ಚಾಗುತ್ತೆ ಎಂದು ಗೊತ್ತಿತ್ತು. ಆದರೆ ಈ ಪ್ರಮಾಣದಲ್ಲಿ ಏರುತ್ತೆ ಅಂತ ನಮಗೆ ಮಾಹಿತಿ ಬಂದಿರಲಿಲ್ಲ. ಜುಲೈ ಅಂತ್ಯಕ್ಕೆ ಏರಬೇಕಿದ್ದ ಪ್ರಮಾಣ ಈಗಲೇ ಬಂದಿದೆ. ಸರ್ಕಾರ ಎಲ್ಲ ವ್ಯವಸ್ಥೆ ಮಾಡುತ್ತಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ವೈದ್ಯರಿಗೆ ಸಚಿವರ ಅಭಯ: ವೈದ್ಯರು ಕೊರೋನಾಗೆ ಭಯ ಪಡುವ ಅಗತ್ಯ ಇಲ್ಲ. ನನ್ನ ಕುಟುಂಬದಲ್ಲೇ ಮೂವರಿಗೆ ಸೋಂಕು ಇತ್ತು. ಆದರೂ ನಾನು ಹೆದರಲಿಲ್ಲ. ಇದೇನು ಗುಣವಾಗದ ಕಾಯಿಲೆಯಲ್ಲ. ವೈದ್ಯರಿಗೆ ನಾನೇ ಬ್ರ್ಯಾಂಡ್ ಅಂಬಾಸಿಡರ್. ನಾನು ಪ್ರತಿದಿನ ಕೋವಿಡ್ ಆಸ್ಪತ್ರೆಗೆ ಭೇಟಿ ಕೊಡುತ್ತಿದ್ದೇನೆ. ವೈದ್ಯರು ಹೆದರದೇ ಕರೋನಾ ಕರ್ತವ್ಯಗಳಲ್ಲಿ ಧೈರ್ಯವಾಗಿ ತೊಡಗಿಸಿಕೊಳ್ಳಿ ಎಂದು ಡಾ. ಸುಧಾಕರ್ ಕರೆ ನೀಡಿದರು.