

ಚೆನ್ನೈ : ತಮಿಳುನಾಡಿನ ತೂತ್ತುಕುಡಿಯ ಜಯರಾಜ್ ಮತ್ತವರ ಮಗ ಬೆನ್ನಿಕ್ಸ್ ಪೊಲೀಸ್ ಕಸ್ಟಡಿ ಸಾವು ಪ್ರಕರಣದ ವಿಚಾರಣೆ ಆರಂಭಿಸಿರುವ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಮತ್ತು ಕೇಂದ್ರದಿಂದ ಅನುಮತಿ ಪಡೆದ ನಂತರ ಎರಡು ಎಫ್ಐಆರ್ಗಳನ್ನು ದಾಖಲಿಸಿದೆ.
ತನಿಖೆಗಾಗಿ ಸಿಬಿಐ ತಂಡವೊಂದನ್ನು ರಚಿಸಿದ್ದು, ಈ ತಂಡ ತಮಿಳುನಾಡಿಗೆ ಭೇಟಿ ನೀಡಲಿದೆ. ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ತಮಿಳುನಾಡು ಮುಖ್ಯಮಂತ್ರಿ ಮಾಡಿದ್ದ ಮನವಿ ಹಿನ್ನೆಲೆ ಕೇಂದ್ರ ತನಿಖೆಯನ್ನು ಸಿಬಿಐಗೆ ವಹಿಸಿದೆ. ಇದಕ್ಕೂ ಮೊದಲು ಕೇಂದ್ರೀಯ ತನಿಖಾ ಸಂಸ್ಥೆ ಪ್ರಕರಣ ಕೈಗೆತ್ತಿಕೊಳ್ಳುವವರೆಗೂ ನೀವೆ ತನಿಖೆ ಮುಂದುವರೆಸಿ ಎಂದು ಮದ್ರಾಸ್ ಹೈಕೋರ್ಟ್ನ ಮಧುರೈ ನ್ಯಾಯಪೀಠ ಸಿಬಿ-ಸಿಐಡಿಗೆ ನಿರ್ದೇಶನ ನೀಡಿತ್ತು. ಪ್ರಕರಣ ಸಂಬಂಧ ಸಿಐಡಿ ಈವರೆಗೆ ಇನ್ಸ್ಪೆಕ್ಟರ ಸೇರಿದಂತೆ ಐವರು ಪೊಲೀಸರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದೆ.
ಲಾಕ್ಡೌನ್ ವಿನಾಯಿತಿ ಅವಧಿ ನಂತರವೂ ಅಂಗಡಿ ತೆಗೆದಿದ್ದರು ಎಂಬ ಆರೋಪದ ಹಿನ್ನೆಲೆ ಪೊಲೀಸರು ಕಳೆದ ಜೂ.19ರಂದು ಜಯರಾಜ್ ಮತ್ತವರ ಮಗ ಬೆನ್ನಿಕ್ಸ್ ಅವರನ್ನು ಬಂದಿಸಿದ್ದರು. ಆದರೆ ಪೊಲೀಸರಿಂದ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಅವರು ನಾಲ್ಕು ದಿನಗಳ ಬಳಿಕ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರ ಸಾವಿಗೆ ಪೊಲೀಸರು ನೀಡಿರುವ ಚಿತ್ರಹಿಂಸೆಯೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಘಟನೆ ಕುರಿತು ಜಾಲತಾಣಗಳಲ್ಲಿ ದೊಡ್ಡ ಅಭಿಯಾನವೇ ನಡೆದಿತ್ತು. ಬಾಲಿವುಡ್ ಸ್ಟಾರ್ಗಳು, ಕ್ರಿಕೇಟರ್ಗಳು, ಸಾಮಾಜಿಕ ಹೋರಾಟಗಾರರು ಸೇರಿದಂತೆ ಸಹಸ್ರಾರು ಮಂದಿ ಪೊಲೀಸರ ದೌರ್ಜನ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಘಟನೆ ಸಂಬಂಧ ಇಬ್ಬರು ಎಸ್ಐ ಸೇರಿದಂತೆ ನಾಲ್ವರು ಪೊಲೀಸರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ. ಮುಖ್ಯಮಂತ್ರಿ ಪಳನಿಸ್ವಾಮಿ ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ನೀಡಿದ್ದು, ಕುಟುಂಬದ ಓರ್ವ ಸದಸ್ಯರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ.