

ಬೆಂಗಳೂರು: ಮಹಿಳೆಯರ ರಕ್ಷಣೆ ಹಾಗೂ ಅವರ ಗೌರವ ಕಾಪಾಡಲು ನ್ಯಾಯಾಲಯಗಳು ಮಹಾಭಾರತದಲ್ಲಿ ಧರ್ಮ ಸಂರಕ್ಷಣೆ ಮಾಡಿದ ಶ್ರೀಕೃಷ್ಣನ ರೀತಿ ನಡೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ವೃದ್ಧೆಯೊಬ್ಬರ ಮೇಲೆ ಅತ್ಯಾಚಾರವೆಸಗಿದ್ದ ಯುವಕನೊಬ್ಬನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿದೆ.
ದಕ್ಷಿಣ ಕನ್ನಡದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯಿಂದ ಬಿಡುಗಡೆ ಕೋರಿ ನಾಗೇಶ್ ಎಂಬಾತ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಇದನ್ನೂ ಓದಿ: ಟ್ವಿಟರ್‌ನಲ್ಲಿ ಅವಹೇಳನ ಮಾಡಿದ ಮಹಿಳೆಗೆ ಬಂಧನ ಭೀತಿ: ಹೈಕೋರ್ಟ್ ಹೇಳಿದ್ದೇನು?
ಕೊರ್ಟ್ ಹೇಳಿದ್ದೇನು?: ದೇಶಕ್ಕೆ ಸ್ವಾತಂತ್ರ್ಯ ದೊರೆತು 74 ವರ್ಷಗಳು ಕಳೆದಿದ್ದರೂ, ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಕ್ರೌರ್ಯ ನಿಂತಿಲ್ಲ. ಕಾನೂನು ಉಲ್ಲಂಘಿಸುವರ ಕೈಗಳಿಂದ ಮಹಿಳೆಯರು ಸುರಕ್ಷಿತವಾಗಿಲ್ಲ. ಈಗ ಮಹಿಳೆಯರ ರಕ್ಷಣೆಗಾಗಿ ನ್ಯಾಯಾಲಯಗಳು ಧರ್ಮಪಾಲಕರಾಗಿ ವರ್ತಿಸುವ ಸಮಯ ಬಂದಿದೆ. ಅತ್ಯಾಚಾರಿಗಳು ಸೇರಿ ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ನಿಲುವು ತಾಳಬೇಕಿದೆ. ಮಹಿಳೆಯರ ರಕ್ಷಣೆಗೆ ಹಾಗೂ ಅವರ ಗೌರವ ಕಾಪಾಡಲು ನ್ಯಾಯಾಲಯಗಳು ಮಹಾಭಾರತದಲ್ಲಿ ಧರ್ಮ ಕಾಪಾಡಿದ ಶ್ರೀಕೃಷ್ಣನಂತೆ ವರ್ತಿಸಬೇಕಿದೆ ಎಂದು ಸೂಚ್ಯವಾಗಿ ಹೇಳಿದೆ.ಭಗವದ್ಗೀತೆಯ ನಾಲ್ಕನೇ ಅಧ್ಯಾಯದ ‘‘ಯದಾ ಯದಾಹಿಧರ್ಮಸ್ಯ ಗ್ಲಾನಿರ್ಭವತಿ ಭಾರತ’ ಶ್ಲೋಕವನ್ನು ತೀರ್ಪಿನಲ್ಲಿ ಉಲ್ಲೇಖಿಸಿರುವ ಪೀಠ, ಅನಾದಿಕಾಲದಿಂದಲೂ ಮಹಿಳೆಯರಿಗಾಗುತ್ತಿರುವ ಅನ್ಯಾಯವನ್ನು ನೋಡಿಕೊಂಡು ನ್ಯಾಯಾಲಯಗಳು ಮೂಕ ಪ್ರೇಕ್ಷಕನಂತೆ ವರ್ತಿಸಲು ಸಾಧ್ಯವಿಲ್ಲ. ವೃದ್ಧೆಯನ್ನು ಅತ್ಯಾಚಾರ ಮಾಡಿರುವ ಆರೋಪಿ ಹೀನ ಕೃತ್ಯ ಎಸಗಿದ್ದಾನೆ. ಅವನ ವಿರುದ್ಧದ ಆರೋಪಗಳು ಸಾಬೀತಾಗಿವೆ. ಆತನಿಗೆ ಶಿಕ್ಷೆ ವಿಧಿಸಿರುವ ವಿಚಾರಣಾ ನ್ಯಾಯಾಲಯದ ಕ್ರಮ ಶ್ಲಾಘನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಮೇಲ್ಮನವಿ ವಜಾಗೊಳಿಸಿದೆ. ಇದನ್ನೂ ಓದಿ: ಎಲ್‌ಪಿಎಲ್ ಆಟಗಾರರ ಹರಾಜಿನಲ್ಲಿ ಭಾರತದ ಮುನಾಫ್ ಪಟೇಲ್, ವಿಂಡೀಸ್ ದೈತ್ಯ ಕ್ರಿಸ್ ಗೇಲ್..
ಪ್ರಕರಣವೇನು?: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮೂಲದ ನಾಗೇಶ್ 2013ರಲ್ಲಿ ಮಂಗಳೂರಿನಲ್ಲಿ ವಾಸವಿದ್ದ. ಅಲ್ಲಿ ಪರಿಚಯವಾಗಿದ್ದ 69 ವರ್ಷದ ವೃದ್ಧೆಯ ಮನೆಗೆ ಜು.14ರಂದು ನುಗ್ಗಿದ್ದ ನಾಗೇಶ್ ಚಾಕು ತೋರಿಸಿ ಬೆದರಿಸಿ ಅತ್ಯಾಚಾರವೆಸಗಿದ್ದಲ್ಲದೆ, 5,500 ರೂ. ನಗದು ಹಾಗೂ 51 ಸಾವಿರ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ನಾಗೇಶ್‌ನನ್ನು ಬಂಧಿಸಿದ್ದ ಪೊಲೀಸರು ಅತಿಕ್ರಮ ಪ್ರವೇಶ, ಅತ್ಯಾಚಾರ, ದರೋಡೆ ಹಾಗೂ ಜೀವ ಬೆದರಿಕೆ ಆರೋಪಗಳಡಿ ಪ್ರಕರಣ ದಾಖಲಿಸಿ, ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯ ನಾಗೇಶ್‌ನನ್ನು ದೋಷಿ ಎಂದು ತೀರ್ಮಾನಿಸಿ ಅತ್ಯಾಚಾರ ಪ್ರಕಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ 2014ರ ನವಂಬರ್‌ನಲ್ಲಿ ತೀರ್ಪು ನೀಡಿತ್ತು.