

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ಠಾಕ್ರೆ ವಿರುದ್ಧ ಟ್ವಿಟರ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿ ಮಹಿಳೆಯು ಪೊಲೀಸರು ತನ್ನನ್ನು ಬಂಧಿಸುವುದಕ್ಕೆ ಮಧ್ಯಂತರ ತಡೆ ನೀಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಿಚಾರಣೆ ನಡೆಸಿತು.
ಸಂವಿಧಾನದ 19ನೇ ಪರಿಚ್ಛೇದದ ಅಡಿಯಲ್ಲಿ ನೀಡಲಾಗಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಸಂಪೂರ್ಣ ಹಕ್ಕಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳಾದ ಎಸ್.ಎಸ್.ಶಿಂಧೆ ಮತ್ತು ಎಂ.ಎಸ್.ಕಾರ್ನಿಕ್, ಮಹಿಳೆಯ ಅರ್ಜಿಯನ್ನು ತಿರಸ್ಕರಿಸಿದರು. ಆದರೂ, ಮಹಿಳೆಯನ್ನು ಮುಂದಿನ ಎರಡು ವಾರಗಳ ಕಾಲ ಬಂಧಿಸದಂತೆ ರಾಜ್ಯ ಸರ್ಕಾರ ನೀಡಿರುವ ಮೌಖಿಕ ಭರವಸೆಯನ್ನು ಒಪ್ಪಿಕೊಂಡರು.
ಆರೋಪಿ ಮಹಿಳೆ ಸುನೈನಾ ಹೊಲೈ ಎರಡು ವಾರಗಳಲ್ಲಿ ನಿಯಮಿತವಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಬಂದು ತನಿಖೆಗೆ ಸಹಕರಿಸಬೇಕು ಎಂದು ರಾಜ್ಯ ಸರ್ಕಾರ ಹೇಳಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಹೈಕೋರ್ಟ್, ಎರಡು ವಾರಗಳ ಅವಧಿಯಲ್ಲಿ ಪೊಲೀಸರು ತಮ್ಮ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಂಡರೆ ಆ ಮಹಿಳೆ ನ್ಯಾಯಾಲಯದ ಮೊರೆ ಹೋಗಬಹುದು ಎಂದು ಹೇಳಿದೆ.
ನವೀಮುಂಬೈ ನಿವಾಸಿಯಾದ ಸುನೈನಾ ಹೊಲೈ ವಿರುದ್ಧ ಐಪಿಸಿ ಸೆಕ್ಷನ್ 505 (2)ರ ಅಡಿಯಲ್ಲಿ ದ್ವೇಷ ಹುಟ್ಟಿಸುವ, ಭಿನ್ನಮತ ಉತ್ತೇಜಿಸುವ ಮತ್ತು ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಹುಟ್ಟಿಸುವ ಐಟಿ ಕಾಯ್ದೆ 153(ಎ) ಅಡಿ ಪ್ರಕರಣ ದಾಖಲಾಗಿದೆ. ಜುಲೈ 25ರಿಂದ 28ರ ನಡುವೆ ಅವರು ಟ್ವಿಟರ್‌ನಲ್ಲಿ ಉದ್ಧವ್ ಠಾಕ್ರೆ ಮತ್ತು ಆದಿತ್ಯ ಠಾಕ್ರೆ ವಿರುದ್ಧ ಅವಹೇಳನಕಾರಿ ಹಾಗೂ ಆಕ್ರಮಣಕಾರಿ ವ್ಯಂಗ್ಯಚಿತ್ರ ಸೇರಿ ಹಲವು ಪೋಸ್ಟ್‌ಗಳನ್ನು ಮಾಡಿದ್ದರು. (ಏಜೆನ್ಸೀಸ್)