ಪವಿತ್ರಾ ಗೌಡ ಬೇಲ್​ ಅರ್ಜಿ ವಿಚಾರಣೆ ಮುಂದೂಡಿಕೆ; ಮಹಿಳೆ ಎಂಬುದನ್ನು ಪರಿಗಣಿಸಿ ಜಾಮೀನು ನೀಡಿ ಎಂದ ಆರೋಪಿ ಪರ ವಕೀಲರು

Darshan
Published on

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಒಂದನೇ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್​ ಅವರ ಆಪ್ತೆ ಪವಿತ್ರಾ ಗೌಡ ಅವರು ಜಾಮೀನು ಪಡೆಯಲು ಇನ್ನಿಲ್ಲದ ಕಸರತ್ತನ್ನು ಮಾಡುತ್ತಿದ್ದು, ಅರ್ಜಿಯು ಈಗಾಗಲೇ ಹಲವು ಬಾರಿ ಮುಂದೂಡಲ್ಪಟ್ಟಿದೆ. ಇಂದು (ಆಗಸ್ಟ್​ 27) ನಡೆದ ಅರ್ಜಿ ವಿಚಾರಣೆಯೂ ಬುಧವಾರಕ್ಕೆ (ಆಗಸ್ಟ್​ 28) ಮುಂದೂಡಲಾಗಿದ್ದು, ಪೊಲೀಸರು ಇನ್ನಷ್ಟೇ ನ್ಯಾಯಾಲಯಕ್ಕೆ ಚಾರ್ಜ್​​ಶೀಟ್​ ಸಲ್ಲಿಸಬೇಕಿದೆ.

ಜಾಮೀನು ಕೋರಿ ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್​ಗೆ ಅರ್ಜಿ ಸಲ್ಲಿಸಿರುವ ಪವಿತ್ರಾ ಗೌಡ ಪರ ಹಿರಿಯ ವಕೀಲರಾದ ಟಾಮಿ ಸೆಬಾಸ್ಟಿಯನ್​ ವಾದ ಮಂಡಿಸಿದ್ದಾರೆ. ಸುಪ್ರೀಂ ಕೋರ್ಟ್​ ಹಾಗೂ ಅಲಹಾಬಾದ್​ ಹೈಕೋರ್ಟ್​ ನೀಡಿರುವ ತೀರ್ಪನ್ನು ಉಲ್ಲೇಖಿಸಿ ಮಾತನಾಡಿದ ಅವರು ತಮ್ಮ ಕಕ್ಷಿದಾರರು ಮಹಿಳೆ ಎಂಬುದನ್ನು ಪರಿಗಣಿಸಿ ಜಾಮೀನು ನೀಡಿ ಎಂದು ವಾದ ಮಂಡಿಸಿದ್ದಾರೆ.

ರೇಣುಕಾಸ್ವಾಮಿ ಕಪಾಳಕ್ಕೆ ಪವಿತ್ರಾ ಹೊಡೆದಿದ್ದಾರೆಂದು ಆರೋಪಿಸಲಾಗಿದೆ. ಆದರೆ ಆಕೆ ಕೊಲೆಯ ಒಳಸಂಚಿನ ಭಾಗ ಎನ್ನಲಾಗುವುದಿಲ್ಲ. ಸಂಪೂರ್ಣ ಕೇಸನ್ನು ಆರೋಪಿಗಳ ಸ್ವಇಚ್ಛಾ ಹೇಳಿಕೆ ಆಧರಿಸಲಾಗಿದೆ. ಯಾವುದೇ ಪ್ರತ್ಯಕ್ಷದರ್ಶಿ ಹೇಳಿಕೆ ದಾಖಲಾಗಿಲ್ಲ. ಕೊಲೆಯ ಸಂಚೇ ಅಥವಾ ಆಕಸ್ಮಿಕ ಸಾವೇ ಎಂಬುದು ನಂತರ ತಿಳಿಯಬೇಕಿದೆ. ತನಿಖೆ ಸಂಪೂರ್ಣವಾಗಿ ಮುಕ್ತಾಯವಾಗಿದೆ. ಮಹಿಳೆ ಎಂಬುದನ್ನು ಪರಿಗಣಿಸಿ ಜಾಮೀನು ನೀಡಬೇಕು.

darshan

ದರ್ಶನ್ ಸೂಚನೆಯಂತೆ ಪವನ್ ಹೋಗಿ ರಾಘವೇಂದ್ರಗೆ ಹೇಳಿದ್ದಾನೆ. ಅದರಂತೆ ರಾಘವೇಂದ್ರ ಹಾಗೂ ಉಳಿದ ಆರೋಪಿಗಳು ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಪವಿತ್ರಗೌಡಗೆ ತಮಗೆ ಬರ್ತಾ ಇದ್ದ ಮೆಸೇಜ್ ಬಗ್ಗೆ ಪವನ್ ಗೆ ಹೇಳಿದ್ದರು. ಪವನ್ ಈ ವಿಚಾರವನ್ನು ದರ್ಶನ್ ಅವರ ಗಮನಕ್ಕೆ ತಂದಿದ್ದಾರೆ. ಬಳಿಕ ಅವ್ರೆಲ್ಲಾ ಸೇರಿ ಪ್ಲ್ಯಾನ್​ ಮಾಡಿ ರೇಣುಕಸ್ವಾಮಿಯನ್ನು ಕರೆತಂದಿದ್ರು. ಚಿತ್ರದುರ್ಗದಿಂದ ಕರೆದುಕೊಂಡು ಬಂದು ಪಟ್ಟಣಗೆರೆ ಶೆಡ್ ಗೆ ಕರ್ಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಇದರಲ್ಲಿ ಪವಿತ್ರಾ ಗೌಡ ಪಾತ್ರ ಇಲ್ಲ. ಪೊಲೀಸರು ಆಕೆಯ ಸುತ್ತ ಮಾಡಿರೋ ಆರೋಪಗಳು ನಿಜವಲ್ಲ ಎಂದು ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದ್ದಾರೆ.

ಪವಿತ್ರಾ ಗೌಡ ಜೊತೆ ಜಾಮೀನು ಕೋರಿ ಪ್ರಕರಣದ ಇತರೆ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ವಿಚಾರಣೆಯನ್ನು ಬುಧವಾರ (ಆಗಸ್ಟ್​ 28) ಮಧ್ಯಾಹ್ನ 2:45ಕ್ಕೆ ಮುಂದೂಡಿದೆ. ಎಸ್​ಪಿಪಿ ಪ್ರಸನ್ನ ಕುಮಾರ್​ ಅವರ ವಾದ ಮಂಡನೆಗೂ ಕೋರ್ಟ್​ ಸೂಚಿಸಿದ್ದು, ಪವಿತ್ರಾ ಗೌಡಾಗೆ ಜೈಲಾ, ಬೇಲಾ ಎಂಬುದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net