

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಟ್ರಾಫಿಕ್ ಸಮಸ್ಯೆಯಿಂದಲೇ ಹೆಚ್ಚು ಕುಖ್ಯಾತಿ ಪಡೆದಿದ್ದು, ಟ್ರಾಫಿಕ್ ಸಮಸ್ಯೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದರು ವಾಹನ ಸವಾರರೇ ಇದಕ್ಕೆ ಅಡ್ಡಲಾಗಿ ನಿಂತಿದ್ದಾರೆ. ಬೇಕಂತಲೇ ಒನ್ವೇನಲ್ಲಿ ಗಾಡಿ ಚಲಾಯಿಸುವುದು, ಹೆಲ್ಮೆಟ್ ಧರಸದೆ ಬೈಕ್ ಚಾಲನೆ ಸೇರಿದಂತೆ ಅನೇಕ ಉಲ್ಲಂಘನೆಗಳನ್ನು ಮಾಡುತ್ತಿರುತ್ತಾರೆ. ಇದೀಗ ಅದೇ ರೀತಿಯ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದ್ದು, ಟ್ರಾಫಿಕ್ ನಿಯಮ ಉಲ್ಲಂಘಿಸಿದ ಸವಾರನಿಗೆ ಯೋಧರೊ್ಬರು ತಮ್ಮದೇ ಶೈಲಿಯಲ್ಲಿ ಬುದ್ದಿ ಕಲಿಸಿರುವ ಘಟನೆ ಬೆಳಕಿಗೆ ಬಂದಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಒನ್ವೇನಲ್ಲಿ ಬರುವ ದ್ವಿಚಕ್ರ ವಾಹನ ಸವಾರನೋರ್ವ ಎದುರು ಬರುವ ಕಾರಿಗೆ ದಾರಿ ಬಿಡದೆ ಪಕ್ಕಕೆ ಹೋಗುವಂತೆ ಸೂಚಿಸುತ್ತಾನೆ. ಕಾರಿನ ಚಾಲಕ ಹಾರ್ನ್ ಮಾಡಿದರೂ ಆತ ದಾರಿ ಬಿಡದೆ ಉದ್ಧಟತನ ತೋರುತ್ತಾನೆ. ಈ ವೇಳೆ ಸಿಗ್ನಲ್ನಲ್ಲಿ ನಿಂತಿರುವ ಸೇನಾ ವಾಹನದ ಚಾಲಕರೊಬ್ಬರು ಇದನ್ನು ಗಮನಿಸಿ ಕೂಡಲೇ ಇಳಿದು ಬಂದು ದ್ವಿಚಕ್ರ ವಾಹನ ಸವಾರನ ತಲೆಗೆ ಹೊಡೆದು ದಾರಿ ಬಿಡುವಂತೆ ಸೂಚಿಸುತ್ತಾನೆ.
ಇಷ್ಟಾದರೂ ಮಾತು ಕೇಳದ ದ್ವಿಚಕ್ರ ವಾಹನ ಸವಾರನಿಗೆ ಬುದ್ದಿ ಕಳಿಸಲು ಸೇನಾ ವಾಹನದಲ್ಲಿರುವ ಬೆತ್ತ ಒಂದನ್ನು ತರುತ್ತಾರೆ. ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸ್ ಒಬ್ಬರು ಕೂಡಲೇ ಮಧ್ಯಪ್ರವೇಶಿಸಿ ವಾಹನ ಸವಾರನಿಗೆ ದಾರಿ ಬಿಡುವಂತೆ ಸೂಚಿಸುತ್ತಾರೆ. ಇದಾದ ಬಳಿಕ ಆತ ದಾರಿ ಬಿಡುತ್ತಾನೆ. ಈ ಘಟನೆಯ ಸಂಪೂರ್ಣ ದೃಶ್ಯಾವಳಿ ಕಾರಿನ ಡ್ಯಾಶ್ಬೋರ್ಡ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ಈವರೆಗೆ ಐದು ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ.
ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಯೋಧನ ನಡೆಗೆ ಮೆಚ್ಚುಗೆಯೆ ಮಹಾಪೂರವೇ ಹರಿದು ಬರುತ್ತಿದ್ದು, ಈ ರೀತಿ ಟ್ರಕ್ ಪ್ಯಾಟ್ರೋಲಿಂಗ್ ನಗರದ ತುಂಬಾ ಮಾಡಿದರೆ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಈ ರೀತಿ ನಿಯಮ ಉಲ್ಲಂಘನೆ ಮಾಡುವವರಿಗೆ ತಲೆಯ ಬದಲಾಗಿ ಕಪಾಳಕ್ಕೆ ಹೊಡೆಯಬೇಕು ಎಂದು ಕಮೆಂಟ್ ಮಾಡಿ ಯೋಧನ ನಡೆಗೆ ಮೆಚ್ಚುಗೆ ಸೂಚಿಸಿದ್ದಾರೆ.