ಐಸಿಸಿಯ ನೂತನ ಅಧ್ಯಕ್ಷರಾಗಿ ಜಯ್​ ಷಾ ಆಯ್ಕೆ; ಬಳಿಕ ಹೇಳಿದ್ದಿಷ್ಟು

Jay Shah
Published on

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿಯ (ICC) ನೂತನ ಅಧ್ಯಕ್ಷರಾಗಿ ಜಯ್​ ಷಾ ಆಯ್ಕೆಯಾಗಿದ್ದಾರೆ. ಈ ಹಿಂದೆ ಬಿಸಿಸಿಐ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಅವರು ಇದೀಗ ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇಂದು (ಆಗಸ್ಟ್​ 27) ನಡೆದ ಐಸಿಸಿ ಅಧ್ಯಕ್ಷ ಚುನಾವಣೆಯಲ್ಲಿ ಜಯ್​ ಷಾ ಎದುರಾಗಿ ಯಾರು ನಾಮಪತ್ರ ಸಲ್ಲಿಸದ ಕಾರಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ವರ್ಷದ ಡಿಸೆಂಬರ್​ 01ರಂದು ಜಯ್​ ಷಾ ಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಹಾಲಿ ಐಸಿಸಿ ಅಧ್ಯಕ್ಷರಾಗಿರುವ ಗ್ರೆಗ್ ಬಾರ್ಕ್ಲೇ ಅವರ ಕಾರ್ಯಾವಧಿ ನವೆಂಬರ್ 30 ಕ್ಕೆ ಮುಗಿಯಲಿದ್ದು, ಇದಾದ ಬಳಿಕ ಜಯ್ ಶಾ ವಿಶ್ವ ಕ್ರಿಕೆಟ್ ಮಂಡಳಿಯ ಗದ್ದುಗೆ ಏರಲಿದ್ದಾರೆ. ಅದರಂತೆ ಡಿಸೆಂಬರ್ 1 ರಿಂದ ಜಯ್ ಶಾ ಕಾರ್ಯಾರಂಭ ಮಾಡಲಿದ್ದಾರೆ.

ಇದಕ್ಕೂ ಮುನ್ನ ಗ್ರೆಗ್ ಬಾರ್ಕ್ಲೇ ಅವರು 2020 ರಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ 2022ರಲ್ಲಿ ಅವರು ಮರು ಚುನಾಯಿತರಾಗಿದ್ದರು. ಇದೀಗ ಅವರ ಕಾರ್ಯಾವಧಿ ಮುಗಿಯುತ್ತಿದ್ದು, ಹೀಗಾಗಿ ಈ ಬಾರಿ ಚುನಾವಣೆ ಘೋಷಿಸಲಾಗಿತ್ತು. ಆದರೀಗ ಅಧ್ಯಕ್ಷ ಹುದ್ದೆಗೆ ಜಯ್ ಶಾ ಅವರ ಹೆಸರು ಮಾತ್ರ ನಾಮನಿರ್ದೇಶನಗೊಂಡಿದ್ದು, ಅದರಂತೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಜಯ್​ ಷಾ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡಿರುವುದು ನನಗೆ ಖುಷಿಯಾಗಿದೆ. ಕ್ರಿಕೆಟ್ ಅನ್ನು ಮತ್ತಷ್ಟು ಜಾಗತೀಕರಣಗೊಳಿಸಲು ಐಸಿಸಿ ತಂಡ ಮತ್ತು ನಮ್ಮ ಸದಸ್ಯ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಬದ್ಧನಾಗಿದ್ದೇನೆ. ಬಹು ಸ್ವರೂಪಗಳ ಸಹಬಾಳ್ವೆಯನ್ನು ಸಮತೋಲನಗೊಳಿಸುವುದು, ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಯನ್ನು ಉತ್ತೇಜಿಸುವುದು ಮತ್ತು ಹೊಸ ಜಾಗತಿಕ ಮಾರುಕಟ್ಟೆಗಳಿಗೆ ನಮ್ಮ ಮಾರ್ಕ್ಯೂ ಈವೆಂಟ್‌ಗಳನ್ನು ಪರಿಚಯಿಸುವುದು ಮತ್ತು ಕ್ರಿಕೆಟ್ ಅನ್ನು ಹಿಂದೆಂದಿಗಿಂತಲೂ ಹೆಚ್ಚು ಅಂತರ್ಗತ ಮತ್ತು ಜನಪ್ರಿಯಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ಜಯ್​ ಷಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net