ಫ್ಲೈಟ್​ನಲ್ಲೇ ಶುರುವಾಯ್ತು ಗಂಡ ಹೆಂಡತಿಯ ರೊಮ್ಯಾನ್ಸ್​! ಬ್ಲಾಂಕೆಟ್​ ಹಾಕಿ ಸುಮ್ಮನಾದ ಸಿಬ್ಬಂದಿ

flight
Published on

ಇಸ್ಲಾಮಾಬಾದ್​: ಅದೆಷ್ಟೇ ಮುಂದುವರಿದರೂ ಕೆಲವೊಂದು ವಿಚಾರಗಳಲ್ಲಿ ಪ್ರೈವೆಸಿ ಅತಿಮುಖ್ಯವಾಗುತ್ತದೆ. ಗಂಡ ಹೆಂಡತಿಯ ವಿಚಾರವಂತೂ ನಾಲ್ಕು ಗೋಡೆಯನ್ನು ಬಿಟ್ಟು ಹೊರಬರಬಾರದು ಎನ್ನುತ್ತಾರೆ. ಆದರೆ ಈ ಜೋಡಿ ಮಾಡಿದ ಕೆಲಸಕ್ಕೆ ಸಹಪ್ರಯಾಣಿಕರೆಲ್ಲರೂ ಅಸಹ್ಯ ಪಡುವ ಸನ್ನಿವೇಶ ಬಂದೊದಗಿದೆ.

ಪಾಕಿಸ್ತಾನದ ವಿಮಾನವು ಕರಾಚಿಯಿಂದ ಇಸ್ಲಾಮಾಬಾದ್​ಗೆ ತೆರಳುತ್ತಿತ್ತು. ಅದರಲ್ಲಿದ್ದ ಪ್ರಯಾಣಿಕರೆಲ್ಲರೂ ತಮ್ಮ ಪಾಡಿಗೆ ತಾವು ಕುಳಿತಿದ್ದರೆ, ಅದರ ನಾಲ್ಕನೇ ಸಾಲಿನಲ್ಲಿ ಕುಳಿತಿದ್ದ ಗಂಡ ಹೆಂಡತಿ ಬೇರೆಯದ್ದೇ ಕೆಲಸಕ್ಕೆ ಮುಂದಾಗಿದ್ದಾರೆ. ಪರಸ್ಪರ ಮುಖ ಹಿಡಿದುಕೊಂಡು ಮುತ್ತು ಕೊಟ್ಟುಕೊಳ್ಳಲು ಆರಂಭಿಸಿದ್ದಾರೆ. ಬೇರೆಯವರ ಗಮನವೂ ಅವರತ್ತ ಬರುವಂತೆ ವರ್ತಿಸಲಾರಂಭಿಸಿದ್ದಾರೆ. ಅದನ್ನು ಕಂಡ ಸಹ ಪ್ರಯಾಣಿಕರು ವಿಮಾನದ ಸಿಬ್ಬಂದಿಯನ್ನು ಕರೆದು ವಿಚಾರ ಮುಟ್ಟಿಸಿದ್ದಾರೆ. "ಸರ್​, ನಿಮ್ಮಿಂದ ಬೇರೆ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ದಯವಿಟ್ಟು ಸುಮ್ಮನೆ ಕುಳಿತುಕೊಳ್ಳಿ" ಎಂದು ಸಿಬ್ಬಂದಿ ಕೇಳಿದರೂ ಅವರ ಮಾತಿಗೆ ಬೆಲೆ ಕೊಡದ ದಂಪತಿ ತಮ್ಮ ರೊಮ್ಯಾನ್ಸ್​ ಅನ್ನು ಮುಂದುವರಿಸಿದ್ದಾರೆ.

ದಂಪತಿ ರೊಮ್ಯಾನ್ಸ್​ ಅತಿರೇಕಕ್ಕೆ ತಿರುಗಿದ ನಂತರ ವಿಮಾನದ ಸಿಬ್ಬಂದಿ ಅವರ ಮೇಲೆ ಬ್ಲಾಂಕೆಟ್​ ಹಾಕಿದ್ದಾರೆ. ಸ್ವಲ್ಪ ಸಮಯದ ನಂತರ ದಂಪತಿ ಸುಮ್ಮನಾಗಿದ್ದಾಗಿ ಹೇಳಲಾಗಿದೆ. ಅವರ ರೊಮ್ಯಾನ್ಸ್​ನ್ನು ಪ್ರಶ್ನಿಸಿದವರಿಗೆ ಇದು ನಮ್ಮಿಷ್ಟು, ಅದನ್ನು ಕೇಳಲು ನೀವ್ಯಾರು ಎಂದು ರೇಗಾಡಿದ್ದಾರೆ ಎಂದೂ ಹೇಳಲಾಗಿದೆ.

ವಿಮಾನದಲ್ಲಿ ಆ ದಂಪತಿಯೊಂದಿಗೆ ಪ್ರಯಾಣ ಮಾಡಿದ್ದ ವಕೀಲರೊಬ್ಬರು ದಂಪತಿ ವಿರುದ್ಧ ದೂರು ದಾಖಲಿಸಿದ್ದಾರೆ. ಹಾಗೆಯೇ ಅವರನ್ನು ಸುಮ್ಮನಾಗಿಸುವಲ್ಲಿ ವಿಫಲವಾದ ವಿಮಾನದ ಸಿಬ್ಬಂದಿ ಮೇಲೂ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net