

Couple Dies: ಮನೆಯ ಹಿರಿಯರೇ ತಮ್ಮ ಪ್ರೀತಿಯನ್ನು ನಿರಾಕರಿಸಿದರು ಎಂದು ತೀರ ಮನನೊಂದ ಯುವ ಜೋಡಿ ಆತ್ಮಹತ್ಯೆಗೆ ಶರಣಾದ ಘಟನೆ ತೆಲಂಗಾಣದ ಗಜ್ವೆಲ್ನಲ್ಲಿ ವರದಿಯಾಗಿದೆ.
ಯುವ ಪ್ರೇಮಿಗಳ ದುರಂತ ಅಂತ್ಯ ಘಟನೆ ಮಂಗಳವಾರ (ಜೂ.17) ವರ್ಗಲ್ ಮಂಡಲದ ಅವುಸುಲೋನಿಪಲ್ಲಿಯಲ್ಲಿ ಸಂಭವಿಸಿದೆ. ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಎಸ್ಐ ಕರುಣಾಕರ್ ರೆಡ್ಡಿ ಪ್ರಕಾರ, ಗ್ರಾಮದ ಯುವತಿ ಕಲ್ಪನಾ (18) ಮತ್ತು ಅದೇ ಊರಿನ ಶಿವಕುಮಾರ್ (21) ಪರಸ್ಪರ ಪ್ರೀತಿಸುತ್ತಿದ್ದರು. ಕೆಲವು ವರ್ಷಗಳಿಂದ ಪ್ರೀತಿಯಲ್ಲಿ ತೊಡಗಿದ್ದ ಜೋಡಿ, ಈ ವಿಷಯವನ್ನು ಹೆತ್ತವರಿಗೆ ತಿಳಿಸಿದ್ದರು. ಆದ್ರೆ, ಇದಕ್ಕೆ ಅವರು ಸುತಾರಾಮ್ ಒಪ್ಪದ ಹಿನ್ನಲೆ ಮನನೊಂದು ಒಬ್ಬರ ಬೆನ್ನಲ್ಲೇ ಮತ್ತೊಬ್ಬರು ನೇಣಿಗೆ ಕೊರಳೊಡ್ಡಿದ್ದಾರೆ.
ಪ್ರೀತಿಯನ್ನು ತಿರಸ್ಕರಿಸಿದ್ದಲ್ಲದೇ ಅನ್ಯ ಹುಡುಗನೊಂದಿಗೆ ಮದುವೆ ಮಾಡಿಸಲು ಮುಂದಾದ ಕಲ್ಪನಾ ಪೋಷಕರು, ಹುಡುಗನ ಹುಡುಕಾಟದಲ್ಲಿ ತೊಡಗಿದ್ದರು. ಈ ವಿಷಯ ತಿಳಿದ ಶಿವಕುಮಾರ್ ತಮ್ಮ ಕೃಷಿ ಜಮೀನಿನಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಷಯ ತಿಳಿದ ಕೆಲವೇ ಗಂಟೆಯಲ್ಲೇ, ಕಲ್ಪನಾ ಕೂಡ ನೇಣಿಗೆ ಶರಣಾಗಿದ್ದು, ತನ್ನ ಮನೆಯ ಸೀಲಿಂಗ್ ಫ್ಯಾನ್ಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರೇಮಿಗಳ ಸಾವಿಗೆ ಕಾರಣರಾದ ಕುಟುಂಬಸ್ಥರಿಗೆ ಹಿಡಿಶಾಪ ಹಾಕಿರುವ ಗ್ರಾಮಸ್ಥರು, ಕಂಬನಿ ಮಿಡಿದಿದ್ದಾರೆ. ತಮ್ಮ ಮಕ್ಕಳು ಮೃತಪಟ್ಟ ಸುದ್ದಿ ತಿಳಿದು ಎರಡೂ ಕುಟುಂಬಗಳು ಶೋಕದ ಕಗ್ಗತ್ತಿನಲ್ಲಿ ಮುಳುಗಿವೆ,(ಏಜೆನ್ಸೀಸ್).