

ಹಾವೇರಿ: ಶಸ್ತ್ರ ಚಿಕಿತ್ಸೆ ಅಥವಾ ಅಪಘಾತಗಳು ಸಂಭವಿಸಿದಾಗ ಹಾಗೂ ರಕ್ತಹೀನತೆ ಉಳ್ಳವರಿಗೆ ರಕ್ತದ ಅವಶ್ಯಕತೆ ಹೆಚ್ಚಾಗಿರುತ್ತದೆ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಹಾಗಾಗಿ, 18 ವರ್ಷ ಪೂರೈಸಿದ ಆರೋಗ್ಯವಂತ ಯುವಕ ಮತ್ತು ಯುವತಿಯರು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಸರಿತಾ ಕಿವಿಮಾತು ಹೇಳಿದರು.
ನಗರದ ಹಾನಗಲ್ಲ ರಸ್ತೆಯ ಭಗತ್‌ಸಿಂಗ್ ಪದವಿಪೂರ್ವ ಮತ್ತು ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಜೆಸಿಐ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ದಾನಗಳಲ್ಲಿ ರಕ್ತದಾನ ಶ್ರೇಷ್ಠವಾಗಿದ್ದು. ರಕ್ತದಾನದಿಂದ ಒಬ್ಬರ ಜೀವ ಉಳಿಸಬಹುದು. ಹಾಗಾಗಿ, ರಕ್ತದಾನದ ಮಹತ್ವದ ಕುರಿತು ಅರಿವು ಮೂಡಿಸುವುದು ಅಗತ್ಯವಾಗಿದೆ. ಪದವಿ ಕಾಲೇಜುಗಳು, ಸಂಘ-ಸಂಸ್ಥೆಗಳು, ಸಮಾಜ ಸೇವಕರು ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ರಕ್ತದ ಕೊರತೆ ನೀಗಿಸಲು ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ನೀಲೇಶ ಎಂ.ಎನ್. ಮಾತನಾಡಿ, ರಕ್ತದಾನದ ಮಹತ್ವ, ರಕ್ತದಾನ ಶಿಬಿರಗಳ ಆಯೋಜನೆ ಕುರಿತು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ರಕ್ತದ ಕೊರತೆಯಾಗದಂತೆ ಎಲ್ಲರೂ ಸಮನ್ವಯದಿಂದ ಕೆಲಸ ಮಾಡೋಣ ಎಂದು ಹೇಳಿದರು.
ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಬಸವರಾಜ ತಳವಾರ ಮಾತನಾಡಿ, ವಿದ್ಯಾರ್ಥಿಗಳು ಜಂಕ್ ಫುಡ್ ಸೇವಿಸಬಾರದು. ನಮ್ಮ ಸಾಂಪ್ರದಾಯಿಕ, ಪ್ರೋಟಿನ್‌ಯುಕ್ತ ಮತ್ತು ವಿಟಮಿನ್‌ವುಳ್ಳ ಆಹಾರ ಸೇವಿಸಬೇಕು ಎಂದರು.
ಭಗತ್‌ಸಿಂಗ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸತೀಶ ಎಂ.ಬಿ. ಅಧ್ಯಕ್ಷತೆ ವಹಿಸಿದ್ದರು. ಡಾ.ಚನ್ನಬಸಯ್ಯ ವಿರಕ್ತಮಠ, ಜಿಲ್ಲಾ ಐಇಸಿ ಅಧಿಕಾರಿ ಚನ್ನಪ್ಪ ಲಮಾಣಿ, ಪ್ರಾಂಶುಪಾಲ ರತನ್ ಕಾಶಪ್ಪನವರ, ಮಂಜುನಾಥ ಹಟ್ಟಿ, ದತ್ತಾತ್ರೇಯ ಜೋಶಿ, ಇತರರು ಉಪಸ್ಥಿತರಿದ್ದರು. ಉಪನ್ಯಾಸಕಿ ದೀಪಾ ಜೋಗಳ್ಳಿ ಸ್ವಾಗತಿಸಿದರು. ಜಿಲ್ಲಾ ಏಡ್ಸ್ ನಿಯಂತ್ರಣ ಕೇಂದ್ರದ ವಿರಾಜ ಸುಣಗಾರ ನಿರೂಪಿಸಿದರು.
ಜಾಗೃತಿ ಜಾಥಾ:
ರಕ್ತದಾನದ ಕುರಿತು ಜಾಗೃತಿ ಮೂಡಿಸುವ ಜಾಥಾಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್ ಚಾಲನೆ ನೀಡಿದರು. ಭಗತ್‌ಸಿಂಗ್ ಮಹಾವಿದ್ಯಾಲಯದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಜಾಥಾ ಜರುಗಿತು. ಮಕ್ಕಳು ರಕ್ತದಾನದ ಕುರಿತು ಜನಜಾಗೃತಿ ಮೂಡಿಸಿದರು.
30 ಬಾರಿ ಬ್ಲಡ್ ಡೊನೇಶನ್
ಎಂಟು ಬಾರಿ ರಕ್ತದಾನ ಮಾಡಿದ ಹಾವೇರಿಯ ರಕ್ಷಿತಾ ಡಿ., 15 ಬಾರಿ ರಕ್ತದಾನ ಮಾಡಿದ ರಾಣೆಬೆನ್ನೂರಿನ ಪ್ರಜ್ವಲ್ ಜಾಧವ ಹಾಗೂ 30 ಬಾರಿ ರಕ್ತದಾನ ಮಾಡಿದ ಆಡೂರಿನ ಸದಾನಂದ ಬಿ.ಆರೇರ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.