ಸಾಲದ ಹೊರೆ; 4 ತಿಂಗಳ ಕೂಸಿಗೆ ವಿಷ ಉಣಿಸಿ, ಬಳಿಕ ದಂಪತಿ ಆತ್ಮಹತ್ಯೆ| Suicide

Murder 3
Published on

Suicide: ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಅತಿಯಾದ ಸಾಲ ಬಾಧೆಯಿಂದ ಮನನೊಂದು ದಂಪತಿಗಳಿಬ್ಬರು ಡೆತ್​ ನೋಟ್ ಬರೆದಿಟ್ಟು ತಮ್ಮ 4 ತಿಂಗಳ ಕೂಸಿಗೆ ವಿಷ ಉಣಿಸಿ ಕೊಲೆಗೈದು, ಬಳಿಕ ತಾವು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ (ಆಗಸ್ಟ್ 27) ವರದಿಯಾಗಿದೆ.

ಕೈಮಗ್ಗ ಉದ್ಯಮಿ ಸಚಿನ್ ಗ್ರೋವರ್ (30) ಮತ್ತು ಅವರ ಪತ್ನಿ ಶಿವಾನಿ (28) ಸಾಲದ ಸುಳಿಯಲ್ಲಿ ಸಿಲುಕಿದ್ದರು ಎನ್ನಲಾಗಿದೆ. ನಾಲ್ಕು ತಿಂಗಳ ಗಂಡು ಮಗು ಫತೇಹ್ ಮೃತಪಟ್ಟಿದೆ. ಸ್ಥಳದಿಂದ ಡೆತ್​ನೋಟ್ ಪತ್ತೆಯಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, "ದಂಪತಿಗಳು ಮಂಗಳವಾರ ರಾತ್ರಿ ಸೀಲಿಂಗ್ ಫ್ಯಾನ್‌ಗಳಿಗೆ ನೇಣು ಬಿಗಿದುಕೊಂಡಿದ್ದಾರೆ. ಆದರೆ ಮಗುವಿನ ಶವ ಮತ್ತೊಂದು ಕೋಣೆಯಲ್ಲಿ ಪತ್ತೆಯಾಗಿದೆ. ಪ್ರಾಥಮಿಕವಾಗಿ, ಪೋಷಕರು ತಮ್ಮ ಜೀವನವನ್ನು ಕೊನೆಗೊಳಿಸುವ ಮೊದಲು ತಮ್ಮ ಮಗನಿಗೆ ವಿಷಪ್ರಾಶನ ಮಾಡಿದ್ದಾರೆ ಎಂದು ತೋರುತ್ತದೆ. ಕುಟುಂಬವು ಅವರ ಮನೆಯ ಎರಡನೇ ಮಹಡಿಯಲ್ಲಿ ವಾಸಿಸುತ್ತಿತ್ತು. ನೆಲಮಹಡಿಯಲ್ಲಿ ವಾಸಿಸುವ ಅವರ ಸಂಬಂಧಿಕರು ಶವಗಳನ್ನು ಪತ್ತೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಮೃತ ಸಚಿನ್ ಬರೆದ ಡೆತ್​​ನೋಟ್​ನಲ್ಲಿ "ನನ್ನ ಕುಟುಂಬದ ಬಗ್ಗೆ ನನಗೆ ಯಾವುದೇ ದೂರುಗಳಿಲ್ಲ. ಅವರೆಲ್ಲರೂ ನನಗೆ ಬೆಂಬಲ ನೀಡಿದರು. ದಯವಿಟ್ಟು ನಮ್ಮ ಕಾರು ಮತ್ತು ಮನೆಯನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ನಮ್ಮ ಸಾಲವನ್ನು ತೀರಿಸಿಬಿಡಿ. ಇದರಿಂದ ನಮ್ಮ ಸಾಲ ಇನ್ನೂ ಪಾವತಿಸಲಾಗಿಲ್ಲ ಎಂದು ಯಾರೂ ಹೇಳಬಾರದು" ಎಂದು ಬರೆದಿದ್ದಾರೆ.

ಮಂಗಳವಾರ ಸಂಜೆ ತನ್ನ ಮಗ ಬ್ಯಾಂಕಿನಲ್ಲಿ 5 ಲಕ್ಷ ರೂಪಾಯಿ ಠೇವಣಿ ಇಡಬೇಕೆಂದು ಹೇಳಿದ್ದ, ಆದರೆ 3 ಲಕ್ಷ ರೂಪಾಯಿ ಹೊಂದಿಸುವಲ್ಲಿ ಯಶಸ್ವಿಯಾಗಿದ್ದ, ಅದಕ್ಕಾಗಿ ಅವನು ಸಂಕಷ್ಟದಲ್ಲಿದ್ದ ಎಂದು ಸಚಿನ್ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net