ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡ ಕುಸಿತ; ತಾಯಿ-ಮಗು ಸಾವು, 9 ಮಂದಿಗೆ ಗಾಯ| Building collapse

Building collapse 1
Published on

Building collapse: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಿರಾರ್‌ನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡದ ಒಂದು ಭಾಗ ಕುಸಿದು 24 ವರ್ಷದ ಮಹಿಳೆ ಮತ್ತು ಆಕೆಯ ಪುಟ್ಟ ಮಗು ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ (ಆಗಸ್ಟ್ 27) ತಿಳಿಸಿದ್ದಾರೆ.

ನರಂಗಿ ರಸ್ತೆಯಲ್ಲಿರುವ ನಾಲ್ಕು ಅಂತಸ್ತಿನ ರಮಾಬಾಯಿ ಅಪಾರ್ಟ್‌ಮೆಂಟ್‌ನ ಹಿಂಭಾಗದ ಭಾಗವು ಬೆಳಗಿನ ಜಾವ 12:05 ರ ಸುಮಾರಿಗೆ ಪಕ್ಕದ ಚಾಲ್‌ಗೆ ಡಿಕ್ಕಿ ಹೊಡೆದು ಬಿದ್ದು ದುರಂತ ಸಂಭವಿಸಿದೆ. ತಕ್ಷಣಾ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸಿವೆ.

ಈ ಕುರಿತು ಮಾಹಿತಿ ನೀಡಿರುವ ವಿರಾರ್ ನಗರ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು, ಅವಶೇಷಗಳಡಿ ಸಿಲುಕಿದ್ದ 11 ಮಂದಿಯನ್ನು ಹೊರ ತೆಗೆಯಲಾಗಿದೆ. ದುರಂತದಲ್ಲಿ 24 ವರ್ಷದ ಆರೋಹಿ ಓಂಕಾರ್ ಜೋವಿಲ್ ಮತ್ತು ಆಕೆಯ ಒಂದು ವರ್ಷದ ಮಗಳು ಉತ್ಕರ್ಷಾ ಪ್ರಜ್ಞೆ ತಪ್ಪಿದ್ದು, ಆಸ್ಪತ್ರೆಗೆ ಸಾಗಿಸುವ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ವಿರಾರ್ ಮತ್ತು ನಲಸೋಪಾರ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಕುರಿತು ಮಾತನಾಡಿರುವ ಪಾಲ್ಘಾರ್ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ವಿವೇಕಾನಂದ ಕದಮ್,  ಜನಸಂದಣಿಯನ್ನು ನಿಯಂತ್ರಿಸಲು ಮತ್ತು ನಿರಂತರ ಪ್ರಯತ್ನಗಳಿಗೆ ಅನುಕೂಲವಾಗುವಂತೆ ಸ್ಥಳದ ಸುತ್ತಲೂ ತಾತ್ಕಾಲಿಕ ಬ್ಯಾರಿಕೇಡ್ ಅನ್ನು ಸ್ಥಾಪಿಸಲಾಗಿದೆ. ಅವಶೇಷಗಳ ಅಡಿಯಲ್ಲಿ ಯಾರೂ ಸಿಲುಕಿಕೊಳ್ಳದಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ. ಸುಧಾರಿತ ಉಪಕರಣಗಳು ಮತ್ತು ತರಬೇತಿ ಪಡೆದ ರಕ್ಷಣಾ ಸಿಬ್ಬಂದಿಯನ್ನು ಬಳಸಿಕೊಂಡು ನಾವು ಶೋಧ ಕಾರ್ಯಾಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net