ದೆಹಲಿ ಸ್ಫೋಟ; ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್​ ಷಾರನ್ನು ಅರೆಕಾಲಿಕ ನಾಯಕರೆಂದ ಆಪ್​ ಸಂಸದ |Delhi blast

Sanjaya Singh
Published on

ದೆಹಲಿ: ಕೆಂಪು ಕೋಟೆಯ ಬಳಿ ನಡೆದ ಭಯೋತ್ಪಾದಕ ದಾಳಿಯ (Delhi blast) ಬಳಿಕ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಎಎಪಿ ಸಂಸದ ಸಂಜಯ್ ಸಿಂಗ್, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾರನ್ನು "ಅರೆಕಾಲಿಕ ನಾಯಕರು" ಎಂದು ಕರೆದರು.

ದೆಹಲಿಯ ಲೋಕ ನಾಯಕ ಆಸ್ಪತ್ರೆಯಲ್ಲಿ, ಅನೇಕ ಗಾಯಾಳುಗಳು ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ, ನಮ್ಮ ದೇಶದ ಹೆಮ್ಮೆಯ ಸಂಕೇತವಾದ ಕೆಂಪು ಕೋಟೆಯ ಬಳಿ ಸಂಭವಿಸಿದ ಸ್ಫೋಟದಲ್ಲಿ ಅನೇಕರು ಪ್ರಾಣಕಳೆದುಕೊಂಡಿದ್ದಾರ, ಆದರೆ, ಇಂತಹ ಸಮಯದಲ್ಲಿ ನಮ್ಮ ಪ್ರಧಾನ ಮಂತ್ರಿಗಳು ರಾಜನ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗವಹಿಸಲು ಭೂತಾನ್‌ಗೆ ತೆರಳಿದ್ದಾರೆ ಎಂದು ಆರೋಪಿಸಿದರು.

ದೇಶದ ಮೇಲೆ ನಡೆಯುವ ಯಾವುದೇ ಭಯೋತ್ಪಾದಕ ದಾಳಿಯನ್ನು ಯುದ್ಧದ ಕೃತ್ಯವೆಂದು ಪರಿಗಣಿಸಲಾಗುವುದು ಎಂಬ ಪ್ರಧಾನಿಗಳ ಈ ಹಿಂದಿನ ಹೇಳಿಕೆಯನ್ನು ಉಲ್ಲೇಖಿಸಿದ ಸಿಂಗ್​, ಕೆಲ ದಿನಗಳ ಹಿಂದೆ ಫರಿದಾಬಾದ್‌ನಲ್ಲಿ ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಂಡ ಬಳಿಕವೂ, ಸರ್ಕಾರ ಈ ಸ್ಫೋಟವನ್ನು ತಡೆಯುವ ಪ್ರಯತ್ನವನ್ನೇಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ನಮ್ಮ ಪ್ರಧಾನಿ ವಿದೇಶ ಪ್ರವಾಸ ಮಾಡುತ್ತಿದ್ದರೆ, ಇತ್ತ ಗೃಹ ಸಚಿವರು ಬಿಜೆಪಿಯೇತರ ಸರ್ಕಾರಗಳನ್ನು ಉರುಳಿಸುವಲ್ಲಿ ನಿರತರಾಗಿದ್ದಾರೆ. ಹೀಗಾದರೆ ದೇಶದ ಭದ್ರತೆಯ ಬಗ್ಗೆ ಗಮನಹರಿಸುವವರಾರು, ಈ ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಕೇಂದ್ರ ಸರ್ಕಾರ ಇದಕ್ಕೆ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ದೆಹಲಿಯಲ್ಲಿ ಹದಗೆಡುತ್ತಿರುವ ವಾಯು ಮಾಲಿನ್ಯ ಮತ್ತು ಇತ್ತೀಚಿನ ಕೆಂಪು ಕೋಟೆ ಭಯೋತ್ಪಾದಕ ಸ್ಫೋಟದ ಬಳಿಕ ಕೇಂದ್ರ ಸರ್ಕಾರ ವಿರುದ್ಧ, ದೆಹಲಿ ಘಟಕದ ಆಪ್​ ಅಧ್ಯಕ್ಷ ಸೌರಭ್ ಭಾರದ್ವಾಜ್​​ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಭಾರದ್ವಾಜ್, ಇತ್ತೀಚಿನ ಪಾಡ್‌ಕ್ಯಾಸ್ಟ್‌ವೊಂದರಲ್ಲಿನ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಹೇಳಿಕೆಯನ್ನು ಉಲ್ಲೇಖಿಸಿದ್ದು, 74% ಮಾಲಿನ್ಯವು ನಿಯಂತ್ರಿಸುವುದು ದೆಹಲಿ ಸರ್ಕಾರದ ಕೈಯಲ್ಲಿದೆ ಎಂದು ಎಲ್‌ಜಿ ಸಾಬ್ ಹೇಳಿದ್ದಾರೆ, ಅದನ್ನು ಮಾಡಲು ಇಚ್ಛಾಶಕ್ತಿ ಬೇಕಿದೆ ಎಂದರು.

ದೆಹಲಿಯಲ್ಲಿನ ರಸ್ತೆ ಧೂಳಿನಿಂದ ಶೇ 48%, ಫ್ಲೈಓವರ್‌ಗಳ ಕೆಳಗೆ, ಇತರ ಪ್ರದೇಶಗಳಲ್ಲಿ ವಾಸಿಸುವ ಜನರು ಮರವನ್ನು ಸುಡುವುದರಿಂದ ಶೇ 10-11%, ಚಳಿಗಾಲದಲ್ಲಿ ಕಸವನ್ನು ಸುಡುವುದರಿಂದ 5-7% ಮಾಲಿನ್ಯ ಉಂಟಾಗುತ್ತಿದೆ. ಇವೆಲ್ಲವೂ ನಿಯಂತ್ರಿಸಬಹುದಾದ ಸಮಸ್ಯೆಗಳು ಎಂದು ಹೇಳಿದರು. ಕೇಂದ್ರವನ್ನು ಪ್ರತಿನಿಧಿಸುವ ಲೆಫ್ಟಿನೆಂಟ್ ಗವರ್ನರ್ ಕೂಡ ಮಾಲಿನ್ಯ ಮೂಲಗಳನ್ನು ನಿಯಂತ್ರಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ, ಆದರೆ ಸರ್ಕಾರವು ಧೂಳು ನಿಯಂತ್ರಣ, ತ್ಯಾಜ್ಯ ನಿರ್ವಹಣೆ ಮತ್ತು ಕೈಗಾರಿಕಾ ಅನುಸರಣೆಯಂತಹ ತಳಮಟ್ಟದ ಪರಿಹಾರಗಳಲ್ಲಿ ಸಹಕರಿಸುತ್ತಿಲ್ಲ ಎಂದ ಭಾರದ್ವಾಜ್​ ಆರೋಪಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net