

ಬೆಂಗಳೂರು: ಇಡೀ ದೇಶದಲ್ಲಿಯೇ ಅತ್ಯಂತ ಬೃಹತ್ ಕರೊನಾ ಕೇರ್ ಸೆಂಟರ್ ರಾಜ್ಯ ರಾಜಧಾನಿಯಲ್ಲಿ ನಿರ್ಮಾಣವಾಗಿದ್ದು, ಇನ್ನೊಂದು ವಾರದಲ್ಲಿ ಕಾರ್ಯಾರಂಭ ಮಾಡಲಿದೆ.
ತುಮಕೂರು ರಸ್ತೆಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ 10,100 ಹಾಸಿಗೆಗಳ ಸಾಮರ್ಥ್ಯದ ಕರೊನಾ ಕೇರ್ ಸೆಂಟರ್ ನಿರ್ಮಾಣವಾಗಿದೆ. ಒಟ್ಟು ಐದು ಹಾಲ್ಗಳಲ್ಲಿ ಹಾಸಿಗೆಗಳ ವ್ಯವಸ್ಥೆಯಾಗಿದೆ. ಬೆಳಗ್ಗೆ ತಿಂಡಿ, ಸ್ನ್ಯಾಕ್ಸ್, ಊಟ, ಮನರಂಜನೆ, ಯೋಗಕ್ಕೂ ಅಗತ್ಯ ಸಿದ್ಧತೆ ಮಾಡಲಾಗಿದೆ. ಬೆಂಗಳೂರಿನ ಬೇರೆ ಬೇರೆ ಕಡೆಗಳಲ್ಲಿ ನಿರ್ಮಿಸಿರುವ ಕರೊನಾ ಕೇರ್ ಸೆಂಟರ್ಗಳಲ್ಲಿ ಹಾಸಿಗೆಗಳ ಕೊರತೆಯಾದಾಗ ಇದನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇದನ್ನೂ ಓದಿರಿ ಕೆಎಸ್ಆರ್ಟಿಸಿ ಸಿಬ್ಬಂದಿಗೆ 1 ವರ್ಷ ವೇತನ ರಹಿತ ರಜೆ, ಲಕ್ಷಕ್ಕೂ ಹೆಚ್ಚು ನೌಕರರ ಪಾಲಿಗೆ ಮರಣಶಾಸನ?
ಬೃಹತ್ ಕೋವಿಡ್ ಕೇರ್ ಸೆಂಟರ್ಗೆ ಬಿ.ಎಸ್.ಯಡಿಯೂರಪ್ಪ ಅವರು ಸಂಪುಟ ಸಹೋದ್ಯೋಗಿಗಳಾದ ಡಾ.ಸಿ.ಎನ್. ಅಶ್ವತ್ಥನಾರಾಯಣ್, ಬಸವರಾಜ ಬೊಮ್ಮಾಯಿ, ಡಾ.ಕೆ. ಸುಧಾಕರ್, ಬಿ. ಶ್ರೀರಾಮುಲು, ಆರ್. ಅಶೋಕ್, ಶಾಸಕ ಎಸ್.ಆರ್. ವಿಶ್ವನಾಥ್ ಅವರೊಂದಿಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಳ್ಳಿಗೆ ಹೋಗಬೇಡಿ: ಜನರು ಅನಗತ್ಯವಾಗಿ ಬೆಂಗಳೂರಿನಿಂದ ಹಳ್ಳಿಗಳತ್ತ ತೆರಳಬೇಡಿ. ಹಳ್ಳಿಗಳಲ್ಲಿ ಸೋಂಕು ಹಬ್ಬದಂತೆ ಮುನ್ನೆಚ್ಚರಿಕೆ ವಹಿಸಿ. ಇದು ಒಂದೆರಡು ದಿನದ ಹೋರಾಟವಲ್ಲ. ಸತತ ಪ್ರಯತ್ನ, ನಿಮ್ಮೆಲ್ಲರ ಸಹಕಾರ, ಬೆಂಬಲ ಹಾಗೂ ಸಾಮೂಹಿಕ ಇಚ್ಛಾಶಕ್ತಿಯೊಂದಿಗೆ ಸೋಂಕಿನ ವಿರುದ್ಧ ಜಯಿಸೋಣ ಎಂದು ಸಿಎಂ ಮತ್ತೊಮ್ಮೆ ಮನವಿ ಮಾಡಿದರು.