VIDEO| ಭರವಸೆಗಳನ್ನು ಈಡೇರಿಸದಿದ್ದಕ್ಕೆ ಚಪ್ಪಲಿಯಲ್ಲಿ ಹೊಡೆದುಕೊಂಡ ಕೌನ್ಸಿಲರ್​

Slipper Shot
Published on

ಅಮರಾವತಿ: ಚುನಾವಣೆ ಸಮಯದಲ್ಲಿ ಮತದಾರರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸದ ಕಾರಣಕ್ಕೆ ಜನಪ್ರತಿನಿಧಿಯೋರ್ವ ತನ್ನ ಚಪ್ಪಲಿಯಲ್ಲಿ ತಾನೇ ಹೊಡೆದುಕೊಂಡಿರುವ ಘಟನೆ ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯಲ್ಲಿ ನಡೆದಿದೆ.

ವಾರ್ಡ್​ ನಂ 20 ನರಸೀಪಟ್ಟಣ ಪುರಸಭೆ ಸದಸ್ಯನಾದ ಮುಲಪರ್ತಿ ರಾಮರಾಜು ಸೋಮವಾರ ನಡೆದ ಕೌನ್ಸಿಲ್​ ಸಭೆಯಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಕೌನ್ಸಿಲ್​ ಸಭೆಯಲ್ಲಿ ಮಾತನಾಡಿದ ರಾಮರಾಜು ನಾನು ಗೆದ್ದು ಬಂದು ಇಲ್ಲಿಗೆ 31 ತಿಂಗಳುಗಳು ಕಳೆದಿವೆ. ಆದರೆ, ನಾನು ಒಬ್ಬ ಚುನಾಯಿತ ಜನಪ್ರತಿನಿಧಿಯಾಗಿ ಒಳಚರಂಡಿ, ವಿದ್ಯುತ್​, ನೈರ್ಮಲ್ಯ, ರಸ್ತೆ ಸೇರಿದಂತೆ ಸಾರ್ವಜನಿಕರ ಸಮಸ್ಯಗಳನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ.

ನಾನು ಎಷ್ಟೇ ಪ್ರಯತ್ನಿಸಿದ್ದರು ಸಹ ಮತದಾರರಿಗೆ ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ಪುರಸಭೆ ಅಧಿಕಾರಿಗಳು ವಾರ್ಡ್​ ನಂ 20ಅನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಇದುವರೆಗೂ ನನ್ನ ವಾರ್ಡಿಗೆ ಒಂದು ನೀರಿನ ಕನೆಕ್ಷನ್​ ಸಹ ಕೊಡಿಸಲು ನನ್ನಿಂದ ಸಾಧ್ಯವಾಗಿಲ್ಲ. ಕೊಟ್ಟ ಮಾತನ್ನು ಈಡೇರಿಸಲಾಗದೆ ಇದ್ದ ಮೇಲೆ ಸಾಯುವುದೇ ಲೇಸು ರಾಮರಾಜು ಹೇಳಿದ್ದಾರೆ.

ರಾಮರಾಜು ಹೇಳಿಕೆಯ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಆಡಳಿತರೂಢ YSRCP ಹಾಗೂ ಟಿಡಿಪಿ ಪಕ್ಷದ ನಾಯಕರು ಆರೋಪ ಪ್ರತ್ಯಾರೋಪಗಳಲ್ಲಿ ನಿರತಾರಗಿದ್ದಾರೆ. 2021ರಲ್ಲಿ ನಡೆದ ಆಂಧ್ರಪ್ರದೇಶ ಸ್ತಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಮರಾಜು ಟಿಡಿಪಿ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net