ಅಮ್ಮನ ಅಂತ್ಯಸಂಸ್ಕಾರ ಮಾಡಲು ಹಣವಿಲ್ಲವೆಂದು ನೇಣಿಗೆ ಶರಣಾದ ಮಗ!

sucide
Published on

ರಾಂಚಿ: ಅನಾರೋಗ್ಯದಿಂದ ಸಾಕಷ್ಟು ದಿನಗಳ ಕಾಲ ಬಳಲಿ ಸಾವನ್ನಪ್ಪಿದ ಅಮ್ಮನ ಅಂತ್ಯ ಸಂಸ್ಕಾರ ಮಾಡುವುದಕ್ಕೆ ಹಣವಿಲ್ಲವೆಂದು ಮಗನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ.

ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯ ಜಾಸಿಡಿಹ್ ಪೊಲೀಸ್ ಠಾಣೆ ಪ್ರದೇಶದ ಚಾರ್ಕಿ ಪಹಾರಿ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಗ್ರಾಮದ ನಿವಾಸಿ ಕಿಶನ್ ಚೌಧರಿ ಅವರ ತಾಯಿ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರಂತೆ. ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದ ಕಿಶನ್, ಅದಕ್ಕೆಂದು ಸಾಕಷ್ಟು ಖರ್ಚು ಮಾಡಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಾಯಿ ಶುಕ್ರವಾರದಂದು ಕೊನೆಯುಸಿರೆಳೆದಿದ್ದಾಳೆ.

ಶನಿವಾರದಂದು ತಾಯಿಯ ಅಂತ್ಯಸಂಸ್ಕಾರ ಮಾಡಲು ಸಿದ್ಧತೆ ನಡೆಸಲಾಗುತ್ತಿತ್ತು. ಆದರೆ ಅದಕ್ಕೆ ಬೇಕಾದ ಸಾಮಾಗ್ರಿಗಳನ್ನು ತಂದು ಹಾಕುವುದಕ್ಕೆ ಕಿಶನ್ ಬಳಿ ಹಣವಿರಲಿಲ್ಲವಂತೆ. ಅದಾಗಲೇ ತಾಯಿಯ ಸಾವಿನಿಂದ ನೊಂದಿದ್ದ ಆತ ತನ್ನ ಬಳಿ ಅಂತ್ಯ ಸಂಸ್ಕಾರ ಮಾಡಲೂ ಆಗುತ್ತಿಲ್ಲವೆಂದು ಬೇಸರದಿಂದ ಕೋಣೆಯೊಳಗೆ ಹೋಗಿದ್ದಾನೆ. ಅಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತನ ಹೆಂಡತಿ ಇದೀಗ ಅತ್ತೆ ಮತ್ತು ಗಂಡನನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net