ರಾಜ್ಯದಲ್ಲಿ ಹತ್ತಿ ಬೆಳೆ ಕ್ಷೀಣ

cotton crop
Published on

| ಶಿವಾನಂದ ಹಿರೇಮಠ. ಗದಗ

ರಾಜ್ಯದಲ್ಲಿ ಹತ್ತಿ ಬೆಳೆಯುವ ಕ್ಷೇತ್ರ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದೆಯಾದರೂ ಉತ್ಪಾದನೆ ಪ್ರಮಾಣ ಕುಸಿಯುತ್ತಿದೆ. ಈ ಆತಂಕಕಾರಿ ಬೆಳವಣಿಗೆಗೆ, ನೈಸರ್ಗಿಕವಲ್ಲದ ಹತ್ತಿ ಬೀಜದ ಬಳಕೆ ಮತ್ತು ವಿಷಯುಕ್ತ ಔಷಧ ಸಿಂಪಡಣೆ ಕಾರಣ ಎಂಬುದನ್ನು ಕೃಷಿ ಇಲಾಖೆ ಅಂಕಿ-ಅಂಶಗಳು ದೃಢಪಡಿಸುತ್ತವೆ. ಪ್ರಾಕೃತಿಕ ವಿಕೋಪ, ಹೈಬ್ರೀಡ್ ಬೀಜ ಬಳಕೆಯಿಂದ ಅತಿಯಾದ ಕಾಯಿ ಉದುರುವಿಕೆ, ಅತಿಯಾದ ಔಷಧ ಬಳಕೆಯಿಂದ ಬಂಜರಾಗುತ್ತಿರುವ ಭೂಮಿ ಮತ್ತು ಸಾಂಪ್ರದಾಯಿಕ ಹತ್ತಿ ಬೆಳೆ ಕೃಷಿಯಿಂದ ರೈತರು ದೂರವಾಗುತ್ತಿರುವುದರಿಂದ ಉತ್ಪಾದನೆ ಕುಸಿಯುತ್ತಿದೆ. ಬೆಳೆಗೆ ಉತ್ತೇಜನ ನೀಡಲು ಕೃಷಿ ಇಲಾಖೆ ಜಿಲ್ಲಾವಾರು ಗುರಿ ಇಟ್ಟುಕೊಂಡು ಶ್ರಮಿಸುತ್ತಿದೆ.

ಅಂಕಿ ಅಂಶಗಳೇನು?

ನಾಲ್ಕು ವರ್ಷದ ಬೆಳೆ ವಿಮೆ ಸಮೀಕ್ಷಾ ಅಂಕಿ-ಅಂಶಗಳ ಆಧಾರದಲ್ಲಿ ಹತ್ತಿ ಬೆಳೆ ಕ್ಷೇತ್ರ ಅಧಿಕಗೊಂಡಿದೆ. 2019- 20ರಲ್ಲಿ 5.87 ಲಕ್ಷ ಹೆಕ್ಟೇರ್ ಪ್ರದೇಶವಿತ್ತು. 2022- 23ರಲ್ಲಿ 8.22 ಲಕ್ಷ ಹೆಕ್ಟೇರ್​ಗೆ ಏರಿಕೆ ಆಗಿದೆ. ಕೃಷಿ ಕ್ಷೇತ್ರ ಅಧಿಕಗೊಂಡಂತೆ ಉತ್ಪಾದನೆ ಅಧಿಕಗೊಳ್ಳಬೇಕಿತ್ತು. ಆದರೆ, ಕಳೆದ 8 ವರ್ಷದಲ್ಲಿ ಸರಾಸರಿ 5 ಲಕ್ಷಕ್ಕೂ ಅಧಿಕ ಟನ್ ಉತ್ಪಾದನೆ ಕುಸಿದಿದೆ. 2021-22ರಲ್ಲಿ 19.50 ಲಕ್ಷ ಟನ್ ಬೆಳೆ ಉತ್ಪಾದಿಸಲಾಗಿದೆ.

ವಿಮೆಗೆ ಸೀಮಿತವೇ?

ಹತ್ತಿ ಬೆಳೆದರೂ ಕಾಯಿಗಳು ಅತಿಯಾಗಿ ಉದುರಿದಾಗ ರೈತರು ಅರ್ಧದಲ್ಲೇ ಬೆಳೆ ನಾಶಪಡಿಸುವುದಿದೆ. ಹಾಗಾಗಿ ಬೆಳೆಯಲ್ಲಿ ಒಂದಿಷ್ಟು ಕ್ಷೇತ್ರವು ವಿಮೆಗೆ ಮಾತ್ರ ಸೀಮಿತವಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ ಎಂಬ ದಾಖಲೆ ಇದ್ದರೂ ಭೌತಿಕವಾಗಿ 5 ಲಕ್ಷ ಹೆಕ್ಟೇರ್ ಇರಬಹುದು ಎಂದು ಇಲಾಖೆ ಅಂದಾಜಿಸಿದೆ. ಇಳುವರಿ ಕುಸಿತಕ್ಕೆ ಕಾರಣ. ಬೀಜಗಳ ಉತ್ಪಾದನೆ ಪ್ರಕ್ರಿಯೆಯಲ್ಲಿ ಹೆಣ್ಣು ಮತ್ತು ಗಂಡು ಬೀಜದ ಪರಾಗ ಸ್ಪರ್ಶ ತಂತ್ರಜ್ಞಾನ ಪ್ರಕ್ರಿಯೆ ಎಲ್ಲ ಸಂದರ್ಭದಲ್ಲೂ ಅತ್ಯುತ್ತಮವಾಗಿ ನಡೆಯದಿರಬಹುದು. ಆಗ ಹತ್ತಿ ಬೀಜಗಳು ಮೂಲ ಶಕ್ತಿಯನ್ನು ಕಳೆದುಕೊಂಡಿರುತ್ತವೆ. ಇಂತಹ ಬೀಜಗಳಿಂದ ಇಳುವರಿ ಸಾಧ್ಯವಿಲ್ಲ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಪರಿಹಾರವೇನು?

  • ಸಾಂಪ್ರದಾಯಿಕ ಹತ್ತಿ ಬಿತ್ತನೆಗೆ ಆದ್ಯತೆ
  • ಜೈವಿಕ ತಂತ್ರಜ್ಞಾನ (ಹೈಬ್ರೀಡ್) ಬೀಜಗಳ ಜತೆಗೆ ಹೈಬ್ರೀಡ್ ಅಲ್ಲದ ಉತ್ತಮ ದರ್ಜೆಯ ಬಿತ್ತನೆ ಬೀಜ ಬಳಕೆ
  • ಸಾಂಪ್ರದಾಯಿಕ (ಸೆಗಣಿ, ಕಾಂಪೋಸ್ಟ್, ಇತರ) ಗೊಬ್ಬರ ಬಳಕೆ ಹೆಚ್ಚಳ
  • ಕೃಷಿ ಇಲಾಖೆ ಸಲಹೆ ಸೂಚನೆ ಪಾಲಿಸುವುದು

ಆರ್ಥಿಕತೆ ಮೇಲೆ ಪರಿಣಾಮ

ಧಾರವಾಡ, ವಿಜಯಪುರ, ಬೆಳಗಾವಿ, ಗದಗ, ಯಾದಗಿರಿ, ಬಳ್ಳಾರಿ, ರಾಯಚೂರು, ಕಲಬುರಗಿ, ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚಾಗಿ ಹತ್ತಿ ಬೆಳೆಯಲಾಗುತ್ತಿದೆ. ಇದೇ ಜಿಲ್ಲೆಗಳಲ್ಲಿ ಉತ್ಪಾದನೆಯೂ ಕುಸಿಯುತ್ತಿದೆ. ಇದು ರಾಜ್ಯದ ಆರ್ಥಿಕತೆಗೂ ಪೆಟ್ಟು ನೀಡಲಿದೆ. ಸಾವಯವ ಮತ್ತು ಸಾಂಪ್ರದಾಯಿಕತೆಗೆ ಒತ್ತು ನೀಡದಿದ್ದರೆ ಕೃಷಿ ಕ್ಷೇತ್ರ ಮತ್ತಷ್ಟು ಸೊರಗುತ್ತದೆ ಎಂದು ಹಿರಿಯ ರೈತರು ಆತಂಕ ವ್ಯಕ್ತಪಡಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net