BBKS11: ಬಿಗ್​ಬಾಸ್​ ಇತಿಹಾಸದಲ್ಲೇ ಇದು ಮೊದಲು! ಯಾವ ಸ್ಪರ್ಧಿಗೂ ಸಿಗದ ಅಧಿಕಾರ ಭವ್ಯ, ಯಮುನಾ ಪಾಲು

biggboss s11 special power
Published on

ಬೆಂಗಳೂರು: ರಿಯಾಲಿಟಿ ಶೋಗಳ ಪೈಕಿ ಅತೀ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಗಳಿಸಿರುವ ಕನ್ನಡ ಬಿಗ್ ಬಾಸ್ (BiggBoss) ಮನರಂಜನಾ ಕಾರ್ಯಕ್ರಮಕ್ಕೆ ಇದೀಗ ಹೊಸ ರೂಪ ಸಿಕ್ಕಿದ್ದು,​ ಸೀಸನ್ 10ರ ಯಶಸ್ಸಿನ ನಂತರ ಸೀಸನ್​ 11 ಸಖತ್ ಸದ್ದು ಮಾಡುತ್ತಿದೆ. ಸತತ 11 ಸೀಸನ್​ಗಳನ್ನು ತಮ್ಮ ಖಡಕ್​ ಮಾತು, ವಿಭಿನ್ನ ಶೈಲಿಯಿಂದಲೇ ಅಚ್ಚುಕಟ್ಟಾಗಿ, ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep)​, ಒಂದಷ್ಟು ಗೊಂದಲಗಳ ನಡುವೆ ಅಂತಿಮವಾಗಿ ಈ ಬಾರಿಯೂ ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದು ಇದೀಗ ಅವರ ಅಪಾರ ಅಭಿಮಾನಿ ಬಳಗಕ್ಕೆ ಭಾರೀ ಖುಷಿ ನೀಡಿದೆ. ಈ ಮಧ್ಯೆ ಇಂದು ನಡೆಯುತ್ತಿರುವ ಗ್ರ್ಯಾಂಡ್​ ಓಪನಿಂಗ್​ ಕಾರ್ಯಕ್ರಮದಲ್ಲಿ ಮೊದಲ ಸ್ಪರ್ಧಿಯಾಗಿ ಕಿರುತೆರೆ ನಟಿ ಭವ್ಯ ಗೌಡ ಎಂಟ್ರಿ ಕೊಟ್ಟರೆ, ಎರಡನೇ ಸ್ಪರ್ಧಿ ಆಗಿ ನಟಿ ಯಮುನಾ ಬಲಗಾಲಿಟ್ಟು ಒಳಗೆ ಬಿಗ್​ ಮನೆಯೊಳಗೆ ಪ್ರವೇಶಿಸಿದ್ದಾರೆ.

ಈ ಬಾರಿಯ ಬಿಗ್​ ಬಾಸ್​ ಸೀಸನ್​ 11ರಲ್ಲಿ ಸ್ವರ್ಗ ಮತ್ತು ನರಕ ಕಾನ್ಸೆಪ್ಟ್​ ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಮನೆ ಹೇಗಿರಲಿದೆ? ಯಾರು ಯಾವ ಜಾಗಕ್ಕೆ ಸೇರುತ್ತಾರೆ ಎಂಬ ಪ್ರಶ್ನೆ ಬೆಂಬಿಡದೆ ಕಾಡುತ್ತಿತ್ತು. ಇದೀಗ ಅಂತಿಮವಾಗಿ ಇದಕ್ಕೆಲ್ಲ ತೆರೆ ಬಿದ್ದಿದ್ದು, ಭವ್ಯ ಗೌಡ ಮತ್ತು ಯಮುನಾ ಇಬ್ಬರು ಏಕಕಾಲಕ್ಕೆ ಮನೆಯೊಳಗೆ ಪ್ರವೇಶಿಸಿದ್ದಾರೆ. ಈ ಪೈಕಿ ಭವ್ಯ ನರಕದ ಬಾಗಿಲು ತೆರೆದರೆ, ಯಮುನಾ ನೇರವಾಗಿ ಸ್ವರ್ಗಕ್ಕೆ ಲಗ್ಗೆಯಿಟ್ಟಿದ್ದಾರೆ. ಬಿಗ್ ಮನೆಗೆ ಆಗಮಿಸುತ್ತಿದ್ದಂತೆ ಈ ಇಬ್ಬರಿಗೂ ವಿಶೇಷ ಅಧಿಕಾರ ಕೊಟ್ಟ ಬಿಗ್​ಬಾಸ್​, ಮುಂದೆ ಮನೆಯೊಳಗೆ ಬರುವ ಪ್ರತಿಯೊಬ್ಬ ಸ್ಪರ್ಧಿಯ ವ್ಯಕ್ತಿತ್ವ ಗಮನಿಸಿ, ಅವರು ನರಕಕ್ಕೆ ಸೂಕ್ತವೋ? ಸ್ವರ್ಗಕ್ಕೆ ಸರಿಯೋ? ಎಂಬುದನ್ನು ಒಮ್ಮತದಿಂದ ನಿರ್ಧರಿಸಬೇಕು ಎಂದು ತಿಳಿಸಿದ್ದಾರೆ.

ಬಿಗ್​ ಬಾಸ್​ ಗ್ರ್ಯಾಂಡ್​ ಓಪನಿಂಗ್​ನಲ್ಲಿ ಮೊದಲ ಸ್ಪರ್ಧಿಯಾಗಿ ಇವರಿಬ್ಬರು ಹೆಜ್ಜೆಯಿಟ್ಟಿದ್ದೇ ತಡ ಸುದೀಪ್​, ನೀವಿಬ್ಬರು ನಿಜಕ್ಕೂ ಲಕ್ಕಿ ಸ್ಪರ್ಧಿಗಳು ಎಂದು ಶುಭಹಾರೈಸಿ ಮನೆಯೊಳಗೆ ಕಳುಹಿಸಿದರು. ಅಸಲಿಗೆ ಆರಂಭದಲ್ಲಿ ಇದು ಅನೇಕರಿಗೆ ಗೊಂದಲ ಮೂಡಿಸಿದ್ದೇ ಆದರೂ ಬಿಗ್ ಮನೆಯೊಳಗೆ ಭವ್ಯ ಮತ್ತು ಯಮುನಾ ಪ್ರವೇಶಿಸುತ್ತಿದ್ದಂತೆ ಸ್ಪಷ್ಟ ಉತ್ತರ ಸಿಕ್ಕಿತು. ಈ ಬೆನ್ನಲ್ಲೇ ಮೂರನೇ ಸ್ಪರ್ಧಿಯಾಗಿ ಆಗಮಿಸಿದ ಹಾಸ್ಯ ಕಲಾವಿದ ಧನರಾಜ್​ ಆಚಾರ್​ರನ್ನು ಭವ್ಯ-ಯಮುನಾ ಜೋಡಿ ಹೆಚ್ಚು ಯೋಚಿಸದೆ ಸ್ವರ್ಗಕ್ಕೆ ಬರುವಂತೆ ಆಹ್ಬಾನಿಸಿದರು. ಇವರಿಬ್ಬರ ನಿರ್ಧಾರ ಮೇರೆಗೆ ಇದೀಗ ಧನರಾಜ್​ ಸ್ವರ್ಗದ ಬಾಗಿಲು ತೆರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net