

ನವದೆಹಲಿ: ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಇತ್ತೀಚೆಗೆ ಸೂರತ್, ಮುಂಬೈ ಮತ್ತಿತರ ಕಡೆ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದು ನಿಮಗೆ ಗೊತ್ತೇ ಇದೆ. ನಮಗೆ ಕೆಲಸ ಕೊಡಿ, ಇಲ್ಲವೆ ಊರಿಗೆ ಹೋಗಲು ಬಿಡಿ ಎಂಬುದು ಅವರ ಅಹವಾಲಾಗಿತ್ತು.
ಅಮೆರಿಕದಲ್ಲೂ ಶುಕ್ರವಾರದಿಂದ ಲಾಕ್‌ಡೌನ್ ನಿಯಮಾವಳಿಗಳನ್ನು ತೀವ್ರ ಬಿಗಿ ಮಾಡಿರುವ ಅಲ್ಲಿನ ಸರ್ಕಾರ, ಪ್ರತಿಯೊಬ್ಬರೂ ಮನೆಯಲ್ಲೇ ಇರಬೇಕೆಂದು ತಾಕೀತು ಮಾಡಿದೆ. ಇದನ್ನು ಅಲ್ಲಿನ ಜನರೆಲ್ಲರೂ ಪಾಲಿಸುತ್ತಿದ್ದಾರೆಯೇ?
ಇಲ್ಲ. ಅಲ್ಲಿಯೂ ನಮ್ಮಲ್ಲಿ ಮಾಡಿದಂತೆ ಕೆಲವರು ಪ್ರತಿಭಟನೆ ಮಾಡತೊಡಗಿದ್ದಾರೆ. ಕಳೆದ ಒಂದು ವಾರದಿಂದ ಅಮೆರಿಕದ ಅನೇಕ ರಾಜ್ಯಗಳಲ್ಲಿ ಈ ಪ್ರತಿಭಟನೆಗಳು ನಡೆದಿವೆ. ಬಹುತೇಕ ಕಡೆ ಇವುಗಳಲ್ಲಿ ಹೆಚ್ಚಿನ ಜನರೇನೂ ಇರುವುದಿಲ್ಲ. ಬೆರಳೆಣಿಕೆಯಷ್ಟು ಜನ ಸೇರಿಕೊಂಡು, ‘ನಾವು ಕೆಲಸಕ್ಕೆ ಹೋಗಬೇಕು’, ‘ಮನೆಯಲ್ಲಿ ಇರಲು ಸಾಧ್ಯವಿಲ್ಲ’, ‘ಲಾಕ್‌ಡೌನ್ ಅಂತ್ಯಗೊಳಿಸಿ’ ಎಂಬರ್ಥದ ಇಂಗ್ಲಿಷ್ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಆದರೆ ಕೆಲವೆಡೆ ಇಂತಹ ಪ್ರತಿಭಟನೆಗಳಲ್ಲಿ ನೂರಾರು, ಸಾವಿರಾರು ಜನ ರಸ್ತೆಗೆ ಇಳಿದಿರುವುದೂ ಇದೆ. ಮಿಚಿಗನ್ ರಾಜ್ಯದ ರಾಜಧಾನಿ ಲಾನ್ಸಿಂಗ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಇದಕ್ಕಾಗಿ ಅವರು ‘ಅತಿಯಾದ ಕ್ವಾರಂಟೈನ್ ವಿರುದ್ಧ ಮಿಚಿಗನ್ನರು’ ಎಂಬ ವೇದಿಕೆ ರಚಿಸಿಕೊಂಡಿದ್ದ ಪ್ರತಿಭಟನೆಗೆ ‘ಆಪರೇಷನ್ ಗ್ರಿಡ್‌ಲಾಕ್ ಎಂದು ಹೆಸರಿಟ್ಟುಕೊಂಡಿದ್ದರು! ಇದಕ್ಕೆ ರಾಜಕೀಯ ಬೆಂಬಲವೂ ಇತ್ತು. ಲಾಕ್‌ಡೌನ್ ಬಿಗಿಗೊಳಿಸಿದ ಸ್ಥಳೀಯ ಗವರ್ನರ್‌ರನ್ನು ‘ಹಿಟ್ಲರ್’ ಎಂದೂ ದೂಷಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗವರ್ನರ್, ‘‘ಜನ ತಮ್ಮ ಕೆಲಸ, ಆದಾಯ ಮುಂತಾದವುಗಳ ಬಗ್ಗೆ ಚಿಂತಿತರಾಗಿದ್ದಾರೆ. ಸದಾ ಕಾಲ ಮನೆಯಲ್ಲೇ ಇರುವುದು ಕಷ್ಟ ಎಂಬುದು ನಮಗೂ ಗೊತ್ತಿದೆ. ಆದರೂ ಇದು ಅನಿವಾರ್ಯ. ಯಾರು ಏನು ಬೇಕಾದರೂ ಅನ್ನಲಿ. ನನ್ನ ಚರ್ಮ ದಪ್ಪಗಿದೆ’’ ಎಂದು ಹೇಳಿದ್ದಾರೆ.
ಇನ್ನೊಂದೆಡೆ ನಾರ್ಥ್ ಕೆರೊಲಿನಾದ ರ‌್ಯಾಲೆ ಸಿಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಸುಮಾರು ನೂರು ಜನ ಪಾಲ್ಗೊಂಡಿದ್ದರು. ಓಹಿಯೋ, ರಿಚ್ಮಂಡ್ ಮುಂತಾದ ಪ್ರದೇಶಗಳಲ್ಲಿಯೂ ಪ್ರತಿಭಟನೆಗಳು ನಡೆದಿವೆ.