

ನವದೆಹಲಿ: ಇತ್ತೀಚೆಗಷ್ಟೇ ಖರೀದಿಸಿ, ವಾಯುಪಡೆಯ ಸೇವೆಗೆ ಸೇರ್ಪಡೆಗೊಳಿಸಲಾಗಿದ್ದ ಯುದ್ಧಹೆಲಿಕಾಪ್ಟರ್ ಒಂದು ಪಂಜಾಬ್ನ ಹೋಷಿಯಾರ್ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಹೆಲಿಕಾಪ್ಟರ್ನಲ್ಲಿದ್ದ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿರುವುದಾಗಿ ವಾಯುಪಡೆ ಮೂಲಗಳು ತಿಳಿಸಿವೆ.
ಅಮೆರಿಕದಿಂದ ಖರೀದಿಸಲಾಗಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಹೊಚ್ಚಹೊಸ ಅಪಾಚೆ ಯುದ್ಧಹೆಲಿಕಾಪ್ಟರ್ನ ತುರ್ತು ಭೂಸ್ಪರ್ಶ ಹಲವು ಆತಂಕ ಮತ್ತು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ವಾಯುಪಡೆ, ಏಪ್ರಿಲ್ 17ರಂದು ಅಪಾಚೆ ಯುದ್ಧಹೆಲಿಕಾಪ್ಟರ್ ಪಠಾಣ್ಕೋಟ್ ವಾಯುನೆಲೆಯಿಂದ ಹಾರಾಟ ಆರಂಭಿಸಿತ್ತು. ಒಂದು ಗಂಟೆಗೂ ಹೆಚ್ಚು ಅವಧಿಯ ಹಾರಾಟದ ಬಳಿಕ ಕೆಲವೊಂದು ತಾಂತ್ರಿಕ ದೋಷ ಕಂಡುಬಂದಿತು. ಹಾಗಾಗಿ, ಮುನ್ನೆಚ್ಚರಿಕೆಯ ಕ್ರಮವಾಗಿ ಪಂಜಾಬ್ನ ಹೋಷಿಯಾರ್ಪುರದ ಇಂಡೋರಾ ಎಂಬ ಗ್ರಾಮದಲ್ಲಿ ಅದನ್ನು ತುರ್ತು ಭೂಸ್ಪರ್ಶ ಮಾಡಿಸಲಾಯಿತು. ಈ ವಿಷಯದಲ್ಲಿ ಹೆಲಿಕಾಪ್ಟರ್ನ ಕ್ಯಾಪ್ಟನ್ ಹೆಚ್ಚು ಜಾಣತನ ತೋರಿದ್ದಾರೆ. ಹೆಲಿಕಾಪ್ಟರ್ನಲ್ಲಿದ್ದ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಆಸ್ತಿಪಾಸ್ತಿಗೆ ಯಾವುದೇ ನಷ್ಟವಾಗಿಲ್ಲ. ತಾಂತ್ರಿಕ ದೋಷವನ್ನು ಸರಿಪಡಿಸಿದ ಬಳಿಕ ಅದನ್ನು ವಾಯುನೆಲೆಗೆ ಮರಳಿ ಕೊಂಡೊಯ್ಯಲಾಗುವುದು ಎಂದು ಹೇಳಿದೆ.
ಭಾರತ 22 ಅಪಾಚೆ ಹೆಲಿಕಾಪ್ಟರ್ಗಳ ಖರೀದಿಗೆ ಅಮೆರಿಕದೊಂದಿಗೆ 2015ರಲ್ಲಿ 1.1 ಶತಕೋಟಿ ಡಾಲರ್ ಮೊತ್ತದ ಒಪ್ಪಂದ ಮಾಡಿಕೊಂಡಿದೆ. ಈ ಹೆಲಿಕಾಪ್ಟರ್ಗಳ ಎರಡು ಪ್ರತ್ಯೇಕ ಸ್ಕ್ವಾಡ್ರನ್ಗಳನ್ನು ರಚಿಸಿರುವ ವಾಯಪಡೆ ಒಂದು ಸ್ಕ್ವಾಡ್ರನ್ ಅನ್ನು ಪಠಾಣ್ಕೋಟ್ ವಾಯುನೆಲೆಯಲ್ಲೂ ಮತ್ತೊಂದನ್ನು ಜೋಹ್ರಾಟ್ ವಾಯುನೆಲೆಯಲ್ಲೂ ನೆಲೆಗೊಳಿಸಲು ನಿರ್ಧರಿಸಿದೆ.
ಈ ಹೆಲಿಕಾಪ್ಟರ್ಗಳಿಗೆ ಹೆಲ್ಫೈರ್ ಕ್ಷಿಪಣಿಗಳನ್ನು ಅಳವಡಿಸಬಹುದಾಗಿದ್ದು, ಒಂದು ನಿಮಿಷದಲ್ಲಿ 128 ಟಾರ್ಗೆಟ್ಗಳನ್ನು ಗುರುತಿಸಿ, ಅವುಗಳಲ್ಲಿ ಹೆಚ್ಚು ಅಪಾಯಕಾರಿಯಾದ ಟಾರ್ಗೆಟ್ ಅನ್ನು ಗಮನಿಸಿ, ಕ್ಷಿಪಣಿಗಳನ್ನು ಸಿಡಿಸಬಹುದಾಗಿದೆ.