

ನವದೆಹಲಿ: ಇರಾನ್ನಲ್ಲಿ 255, ಅರಬ್ ಸಂಯುಕ್ತ ಸಂಸ್ಥಾನದಲ್ಲಿ (ಯುಎಇ) 12 ಹಾಗೂ ಇಟಲಿಯಲ್ಲಿ ಐವರು ಸೇರಿ ವಿದೇಶಗಳಲ್ಲಿ ಕನಿಷ್ಠ 276 ಭಾರತೀಯರು ಕರೊನಾ ವೈರಸ್ ಸೋಂಕಿತರಿದ್ದಾರೆ. ಅವರನ್ನು ದೇಶಕ್ಕೆ ವಾಪಸ್ ಕರೆ ತರಲು ಸರ್ಕಾರ ಕ್ರಮಕೈಗೊಳ್ಳುತ್ತಿದೆ. ಹಾಂಕಾಂಗ್, ಕುವೈತ್, ರುವಾಂಡಾ ಮತ್ತು ಶ್ರೀಲಂಕಾದಲ್ಲಿ ತಲಾ ಒಬ್ಬ ಭಾರತೀಯ ಕರೊನಾ ಸೋಂಕಿತರಿದ್ದಾರೆಂದು ವಿದೇಶಾಂಗ ರಾಜ್ಯ ಖಾತೆ ಸಚಿವ ವಿ. ನಾರಾಯಣಸ್ವಾಮಿ ಬುಧವಾರ ಲೋಕಸಭೆಗೆೆ ತಿಳಿಸಿದ್ದಾರೆ. ಈ ನಡುವೆ, ದೇಶದ ಹಲವು ಭಾಗಗಳಿಂದ ಹೊಸ ಪ್ರಕರಣಗಳು ವರದಿಯಾಗಿದ್ದು ಸೋಂಕಿತರ ಸಂಖ್ಯೆ 151ಕ್ಕೆ ಏರಿದೆ. ಮಹಾರಾಷ್ಟ್ರದಲ್ಲಿ 42 ಹಾಗೂ ಕೇರಳದಲ್ಲಿ 32 ಪ್ರಕರಣ ಈವರೆಗೆ ಪತ್ತೆಯಾಗಿದೆ.
ಕಳೆದ ಫೆಬ್ರವರಿಯಲ್ಲಿ ಕಾರ್ಗಿಲ್ನಿಂದ ಇರಾನ್ಗೆ
ಭಾರತದ ನಿಯೋಗ ತೆರಳಿತ್ತು. ಇದರಲ್ಲಿ 800 ಜನರು ಇದ್ದರು. ಅವರಲ್ಲಿ ಬಹುತೇಕ ಜನರು ಕರೊನಾ ವೈರಸ್ ಹಾವಳಿ ತೀವ್ರವಾಗಿರುವ ಕ್ವಾಮ್ ಪ್ರದೇಶದ ಹೋಟೆಲ್ ಮತ್ತಿತರ ಜಾಗಗಳಲ್ಲಿ ಉಳಿದು ಕೊಂಡಿದ್ದಾರೆ.
ಕರೊನಾದಿಂದ ಜಾಗತಿಕ ಮಟ್ಟದಲ್ಲಿ ಸಾವಿನ ಸಂಖ್ಯೆ ಬುಧವಾರ 8,092ಕ್ಕೆ ಏರಿದೆ. ಚೀನಾ ಸೇರಿ ಏಷ್ಯಾದಲ್ಲಿ 3,384 ಹಾಗೂ ಯುರೋಪ್ ಸಹಿತ ಜಗತ್ತಿನ ವಿವಿಧ ಭಾಗಗಳಲ್ಲಿ 3,422 ಜನರು ಮೃತಪಟ್ಟಿದ್ದಾರೆ. ಕಳೆದ 24 ತಾಸುಗಳ ಅವಧಿಯಲ್ಲಿ 684 ಸಾವಿನ ಹೊಸ ಪ್ರಕರಣಗಳು ವರದಿಯಾಗಿವೆ. ಇರಾನ್ನಿಂದ 53 ಭಾರತೀಯರು ಸೋಮವಾರ ಮರಳಿದ್ದು ಅಲ್ಲಿಂದ ಒಟ್ಟು 389 ಭಾರತೀಯರನ್ನು ತೆರವು ಮಾಡಿದಂತಾಗಿದೆ.