

ನವದೆಹಲಿ: ದೇಶದಲ್ಲಿ ಕರೊನಾ ವೈರಸ್ ಮಹಾಮಾರಿಯ ಮರಣ ಮೃದಂಗ ಮುಂದುವರಿದಿದ್ದು ಗುರುವಾರ ಮೂವರು ಮೃತಪಟ್ಟಿದ್ದಾರೆ. ಕರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 16ಕ್ಕೇರಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 650 ದಾಟಿದೆ. ಜಾಗತಿಕವಾಗಿ ಕರೊನಾ ಸಾವಿನ ಸಂಖ್ಯೆ 21 ಸಾವಿರ ದಾಟಿದೆ. ಚೀನಾದಲ್ಲಿ ಬಲಿಯಾದವರಿಗಿಂತ ಹೆಚ್ಚಿನವರು ಇಟಲಿ ಮತ್ತು ಸ್ಪೇನ್ನಲ್ಲಿ ಮೃತಪಟ್ಟಿದ್ದಾರೆ. ಇಟಲಿಯಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ 7,500ಕ್ಕೂ ಹೆಚ್ಚಿದ್ದು, ಸ್ಪೇನ್ನಲ್ಲಿ 3,600ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.
ಕಾಶ್ಮೀರದಲ್ಲಿ ಒಬ್ಬ ಧರ್ಮ ಪ್ರಚಾರಕ ಗುರುವಾರ ಮೃತಪಟ್ಟಿದ್ದು, ಇದು ಜಮ್ಮು- ಕಾಶ್ಮೀರದಲ್ಲಿ ಕರೊನಾಕ್ಕೆ ಮೊದಲ ಬಲಿಯಾಗಿದೆ. ಶ್ರೀನಗರ ಹೈಪರ್ಪೋರಾ ಪ್ರದೇಶದ 65 ವರ್ಷದ ವ್ಯಕ್ತಿಗೆ ಸೋಂಕಿರುವುದು ಮೂರು ದಿನಗಳ ಹಿಂದೆ ದೃಢಪಟ್ಟಿದ್ದು ಗುರುವಾರ ಬೆಳಗ್ಗೆ ಆತ ಮೃತಪಟ್ಟ. ಇತ್ತೀಚೆಗೆ ದೆಹಲಿ ಮತ್ತು ಉತ್ತರ ಪ್ರದೇಶದ ಮಸೀದಿಗಳಿಗೆ ಭೇಟಿ ಕೊಟ್ಟು ಮಾ. 16ರಂದು ಮನೆಗೆ ಮರಳಿದ್ದ. ಗುಜರಾತ್ನ ಭಾವನಗರ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 70 ವರ್ಷದ ವ್ಯಕ್ತಿಯೊಬ್ಬ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇದು ರಾಜ್ಯದಲ್ಲಿ ಮೂರನೇ ಕರೊನಾ ಸಾವಾಗಿದೆ. ದೇಶದಲ್ಲೇ ಅತಿ ಹೆಚ್ಚು ಪೀಡಿತರನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ ಮಂಗಳವಾರ ಇನ್ನೊಬ್ಬ ಮಹಿಳೆ ಮೃತಪಟ್ಟಿದ್ದಾರೆ. ಈಕೆಗೆ ಸೋಂಕಿರುವುದು ಗುರುವಾರ ದೃಢಪಟ್ಟಿದೆ. ರಾಜಸ್ಥಾನದ ಭಿಲ್ವಾರಾದಲ್ಲಿ ಸೋಂಕು ದೃಢಪಟ್ಟ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಆದರೆ ಆತ ಈಗಾಗಲೇ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಆತನದ್ದು ಕರೊನಾ ಸೋಂಕಿನಿಂದಾದ ಸಾವೆನ್ನುವುದು ಸರಿಯಲ್ಲ ಎಂದು ರಾಜ್ಯದ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ನಿಯಮ ಉಲ್ಲಂಘಿಸಿದವರಿಗೆ ಲಾಠಿ ಏಟು
ಇಎಂಐ ಮುಂದೂಡಿ ಎಲ್ಲ ಬಗೆಯ ಮಾಸಿಕ ಕಂತುಗಳನ್ನು (ಇಎಂಐ) ಆರು ತಿಂಗಳ ಕಾಲ ಮುಂದೂಡುವ ಹಾಗೂ ಈ ಅವಧಿಗೆ ಬಡ್ಡಿ ವಿಧಿಸದಿರುವ ಬಗ್ಗೆ ಸರ್ಕಾರ ಪರಿಶೀಲಿಸಬೇಕೆಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮನವಿ ಮಾಡಿದ್ದಾರೆ.
ಅಂತಾರಾಷ್ಟ್ರೀಯ ವಿಮಾನಗಳಿಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಏ. 14ರವರೆಗೆ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ ಲಾಕ್ಡೌನ್ ಅವಧಿಯಲ್ಲಿ ದೆಹಲಿಯ ದಿನಸಿ ಅಂಗಡಿಗಳು ದಿನದ 24 ಗಂಟೆಯೂ ತೆರೆದಿರಬಹುದು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸ್ಪಷ್ಟನೆ.
ಲಾಕ್ಡೌನ್ ಅವಧಿಯಲ್ಲಿ ಅಗತ್ಯ ಸಾಮಗ್ರಿ ಮತ್ತು ಸೇವೆಗಳ ಕೊರತೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಖಾತೆ ಅಧಿಕಾರಿಗಳ ಹೇಳಿಕೆ.
ವೈರಾಣು ನಿಯಂತ್ರಣಕ್ಕೆ ಅವಿರತ ಶ್ರಮಿಸುತ್ತಿರುವ ಪೊಲೀಸರು ಮತ್ತು ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಎಚ್ಚರಿಕೆ.
ರೋಬಾಟ್ ನರ್ಸ್ಗಳು!
ರಾಜಸ್ಥಾನ ರಾಜಧಾನಿ ಜೈಪುರದ ಸರ್ಕಾರಿ ಆಸ್ಪತ್ರೆಯೊಂದು ರೋಬಾಟ್ ನರ್ಸ್ ಬಳಸಲು ಮುಂದಾಗಿದೆ. ಇದು ನಿರ್ದಿಷ್ಟ ಪಡಿಸಿದ ರೋಗಿಯ ಬಳಿ ಆಹಾರ ಮತ್ತು ಔಷಧ ಟ್ರೇಗಳನ್ನು ತೆಗೆದುಕೊಂಡ ಹೋಗಬಲ್ಲದು. ಇದರಿಂದ ಆಸ್ಪತ್ರೆ ವೈದ್ಯರು, ನರ್ಸ್ ಮತ್ತಿತರ ಸಿಬ್ಬಂದಿಗೆ ಸೋಂಕು ಹರಡುವ ಸಾಧ್ಯತೆ ಕಡಿಮೆಯಾಗಲಿದೆ. ಈಗ ವೈದ್ಯಕೀಯ ಸಿಬ್ಬಂದಿ ಕೈಗವಸು ಮತ್ತು ಮುಖಗವಸಿನಂಥ ರಕ್ಷಣಾತ್ಮಕ ಸಾಧನಗಳ್ನು ಧರಿಸಿಯೇ ರೋಗಿ ಬಳಿ ಹೋಗಬೇಕಾಗಿದೆ. ರೋಬಾಟ್ ಬಳಕೆ ಬಗ್ಗೆ ಪ್ರಯೋಗ ನಡೆಸಲಾಗುತ್ತಿದ್ದು ಸಮಿತಿಯೊಂದು ಅದನ್ನು ಪರಿಶೀಲಿಸುತ್ತಿದೆ ಎಂದು ಎಸ್ಎಂಎಸ್ ಆಸ್ಪತ್ರೆಯ ಅಧೀಕ್ಷಕ ಡಿ.ಎಸ್. ಮೀನಾ ತಿಳಿಸಿದ್ದಾರೆ.