

ನವದೆಹಲಿ: ಕೋವಿಡ್ನಿಂದ ಮುಕ್ತವಾಗುವವರೆಗೆ ಚುನಾವಣೆಗಳನ್ನು ಮುಂದೂಡಿ ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೇ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಚುನಾವಣೆ ಮುಂದೂಡಲು ಕೋವಿಡ್ಅನ್ನು ಕಾರಣವಾಗಿ ಪರಿಗಣಿಸಲಾಗದು ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಹೇಳಿದೆ.
ಕೇಂದ್ರ ಚುನಾವಣಾ ಆಯೋಗ ಎಲ್ಲ ವಿಚಾರಗಳನ್ನು ಪರಿಗಣಿಸಿರುತ್ತದೆ ಎಂದು ಹೇಳಿದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠ, ಬಿಹಾರ ವಿಧಾನಸಭಾ ಚುನಾವಣೆ ಮುಂದೂಡಿಕೆ ಕೋರಿದ್ದ ಅರ್ಜಿ ವಜಾಗೊಳಿಸಿತು.
ಪ್ರಜಾಪ್ರತಿನಿಧಿತ್ವ ಕಾಯ್ದೆ ಅನ್ವಯ ಕೋವಿಡ್ ಸಂಕಷ್ಟವನ್ನು ವಿಶೇಷ ಸಂದರ್ಭವೆಂದು ಪರಿಗಣಿಸಿ ಚುನಾವಣೆಯನ್ನು ಮುಂದೂಡುವಂತೆ ಮುಖ್ಯ ಚುನಾವಣಾ ಆಯುಕ್ತರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಅವಿನಾಶ್ ಠಾಕೂರ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು.
ಚುನಾವಣಾ ಆಯೋಗ ಎಲ್ಲವನ್ನೂ ಪರಿಗಣಿಸಿರುತ್ತದೆ. ಹೀಗಾಗಿ ಚುನಾವಣೆ ಮುಂದೂಡುವಂತೆ ಆದೇಶಿಸಲು ಸಾಧ್ಯವಿಲ್ಲ ಎಂದು ತಿಳಿಸಿ, ಅರ್ಜಿಯನ್ನು ವಜಾಗೊಳಿಸಿತು.
ಚುನಾವಣಾ ಆಯೋಗ ಈಗಾಗಲೇ ಬಿಹಾರ ಚುನಾವಣೆ ಹಿನ್ನೆಲೆ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.