20 ವರ್ಷ ಜೀವಂತವಾಗಿರುತ್ತೆ ಕರೊನಾ; ಹಸಿ ಮಾಂಸ, ಮೀನು ಮುಟ್ಟಬೇಡಿ; ಚೀನಾ ತಜ್ಞರ ಎಚ್ಚರಿಕೆ

China market
Published on

ನವದೆಹಲಿ: ಇಡೀ ಜಗತ್ತನ್ನೇ ಇನ್ನಿಲ್ಲದಂತೆ ಕಾಡುತ್ತಿರುವ ಕರೊನಾ ವೈರಸ್​ಸದ್ಯಕ್ಕಂತೂ ತೊಲಗುವ ಲಕ್ಷಣಗಳನ್ನು ತೋರಿಸುತ್ತಿಲ್ಲ. ಆದರೆ, ಜನರನ್ನು ಇನ್ನಷ್ಟು ಭೀತಿಗೊಳಪಡಿಸುವ ವಿಷಯಗಳೇ ಕರೊನಾ ಬಗ್ಗೆ ಹೊರಬೀಳುತ್ತಿವೆ.

ಚೀನಾದ ಸಾಂಕ್ರಾಮಿಕ ರೋಗ ತಜ್ಞರಾದ ಪ್ರೊ. ಲೀ ಲಂಜುವಾನ್​ ಆತಂಕಕಾರಿ ವಿಷಯವೊಂದನ್ನು ಹೊರ ಹಾಕಿದ್ದಾರೆ. ಕರೊನಾ ನಿಗದಿತ ತಾಪಮಾನದಲ್ಲಿ 20 ವರ್ಷಗಳವರೆಗೆ ಬದುಕಿರಬಲ್ಲುದು ಎಂದು ಹೇಳಿದ್ದಾರೆ. ಜತೆಗೆ, ಹಸಿ ಮಾಂಸ ಹಾಗೂ ಮೀನನ್ನು ಮುಟ್ಟಲೇ ಬೇಡಿ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಕರೊನಾ ವೈರಸ್​ ಮೇಲೆ ತಂಪು ಯಾವುದೇ ಪರಿಣಾಮ ಬೀರುವುದಿಲ್ಲ. ಶೂನ್ಯಕ್ಕಿಂತ ಕಡಿಮೆ ಉಷ್ಣಾಂಶದಲ್ಲಿ ತಿಂಗಳುಗಟ್ಟಲೇ ಈ ವೈರಸ್​ ಜೀವಂತವಾಗಿರುತ್ತೆ. ಜತೆಗೆ, ಮೈನಸ್​​ 20 ತಾಪಮಾನದಲ್ಲಿ 20 ವರ್ಷಗಳವರೆಗೆ ಬದುಕಿರುತ್ತೆ ಎಂಬುದನ್ನು ಕಂಡು ಹಿಡಿದಿದ್ದಾರೆ.

ಕಡಲು ತಿನಿಸು (ಸೀ ಫುಡ್) ಗಳಲ್ಲಿ ಹಲವು ಬಾರಿ ಕಂಡು ಬಂದಿರುವುದಕ್ಕೆ ಇದೇ ಕಾರಣ ಎಂದು ಹೇಳಲಾಗಿದೆ. ಹೀಗಾಗಿ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುವ ಸಾಲ್ಮನ್​ ಹಾಗೂ ಇತರ ಮಾಂಸವನ್ನು ಕಟ್ಟುನಿಟ್ಟಿನ ಪರೀಕ್ಷೆಗೆ ಒಳಪಡಿಸಿ ಎಂದು ತಜ್ಞರು ಹೇಳಿದ್ದಾರೆ.

ಮಾರುಕಟ್ಟೆ ಹಾಗೂ ಸೋಂಕು ಹರಡುವ ಸಂಭಾವ್ಯತೆ ಹೆಚ್ಚಿರುವ ಇತರ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯನಿರ್ವಹಿಸುವವರು ಕಡ್ಡಾಯವಾಗಿ ಫೇಸ್​ ಶೀಲ್ಡ್​ (ಮುಖಗವಸು) ಧರಿಸಿರಬೇಕೆಂದು ಸೂಚಿಸಲಾಗಿದೆ.

ಮಾರುಕಟ್ಟೆ ಹಾಗೂ ಮಾಂಸ ಮಾರಾಟ ಕೇಂದ್ರಗಳಲ್ಲಿ ಇತ್ತೀಚೆಗೆ ಕಂಡು ಬರುತ್ತಿರುವ ಕರೊನಾ ವೈರಸ್​ ಕುರುಹುಗಳು ಹಿಂದಿನ ವೈರಸ್​ ಜತೆ ಸಾಮ್ಯತೆ ಹೊಂದಿವೆ. ಕರೊನಾ ಒಂದೇ ಜಾಗದಲ್ಲಿ ಬಹುಕಾಲ ಬದುಕುಳಿದಿರುವುದಕ್ಕೆ ಇದು ಪುಷ್ಠಿ ನೀಡುತ್ತಿದೆ ವಿಶ್ಲೇಷಿಸಲಾಗಿದೆ.

ಆದರೆ ಮೀನು, ಮಾಂಸ ತಿನ್ನುವುದರಿಂದ ಜನರು ಕೋವಿಡ್​ಗೆ ಗುರಿಯಾಗಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ವರ್ತಕರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net