

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿನ ತೀವ್ರತೆಯಿಂದ ಅಸ್ವಸ್ಥಗೊಳ್ಳುವವರ ಸಂಖ್ಯೆ ವ್ಯಾಪಕವಾಗಿ ಏರಿಕೆಯಾಗುತ್ತಿದ್ದು, ಸೋಮವಾರ ಬೆಂಗಳೂರಿನಲ್ಲಿ 97 ಮಂದಿ ಸೇರಿದಂತೆ ರಾಜ್ಯದಲ್ಲಿ 146 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ನಂತರ ಕೋವಿಡ್ ಸೋಂಕು ಹಾಗೂ ಸೋಂಕಿತರ ಸಾವಿನ ಸಂಖ್ಯೆ ಇಳಿಮುಖವಾಗಿತ್ತು. ಈ ವರ್ಷ ಮಾರ್ಚ್ ತಿಂಗಳವರೆಗೂ ಬಹುತೇಕ ದಿನ ಒಂದಂಕಿಯಲ್ಲಿಯೇ ಇದ್ದ ಸಾವಿನ ಸಂಖ್ಯೆ ಈಗ ಏಕಾಏಕಿ 150ರ ಗಡಿ ಸಮೀಪಿಸಿದೆ. ಇದರೊಂದಿಗೆ ದಿನದ ಮರಣ ಪ್ರಮಾಣ ದರ ಶೇ 0.92ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 101 ಮಂದಿ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗಿದ್ದಾರೆ. ಇದರಿಂದಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 721ಕ್ಕೆ ತಲುಪಿದೆ. ಈ ಪೈಕಿ ಬೆಂಗಳೂರು ಒಂದರಲ್ಲೇ 166 ಮಂದಿ ಐಸಿಯುನಲ್ಲಿ ದಾಖಲಾಗಿದ್ದಾರೆ. ಇದರಿಂದ ಬೆಂಗಳೂರು ಸೇರಿದಂತೆ ಕೆಲವೆಡೆ ಐಸಿಯು ಹಾಸಿಗೆ ಸಮಸ್ಯೆ ಹೆಚ್ಚಾಗಿದೆ.
ಸೋಂಕಿತರಲ್ಲಿ ಹಾಸನದಲ್ಲಿ 11, ಮೈಸೂರಿನಲ್ಲಿ 8, ಬೆಂಗಳೂರು ಗ್ರಾಮಾಂತರ ಹಾಗೂ ಕಲಬುರ್ಗಿಯಲ್ಲಿ ತಲಾ 6, ಧಾರವಾಡದಲ್ಲಿ ತಲಾ 3, ಯಾದಗಿರಿ, ಚಿಕ್ಕಬಳ್ಳಾಪುರ ಹಾಗೂ ಬೀದರ್‌ನಲ್ಲಿ ತಲಾ ಇಬ್ಬರು ಮತ್ತು ಬಳ್ಳಾರಿ, ಬೆಳಗಾವಿ, ಹಾವೇರಿ, ಕೊಡಗು, ಕೋಲಾರ, ರಾಮನಗರ, ತುಮಕೂರು, ಉತ್ತರ ಕನ್ನಡ ಹಾಗೂ ವಿಜಯಪುರದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಇವರಲ್ಲಿ 26 ಮಂದಿ 50 ವರ್ಷದೊಳಗಿನವರಾಗಿದ್ದಾರೆ. ಒಟ್ಟು ಮೃತರ ಸಂಖ್ಯೆ 13,497ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 15,785 ಪ್ರಕರಣಗಳು ವರದಿಯಾಗಿದ್ದು, 23 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಮೂರಂಕಿ ತಲುಪಿದೆ. ಸೋಂಕು ದೃಢ ಪ್ರಮಾಣ ಶೇ 12.81 ಇದೆ. ಬೆಂಗಳೂರಿನಲ್ಲಿ 9,618 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. ತುಮಕೂರು 652, ಮೈಸೂರು 568, ಕಲಬುರ್ಗಿ 513, ಹಾಸನ 320, ಬೀದರ್ 318, ವಿಜಯಪುರ 302 ಜಿಲ್ಲೆಯಲ್ಲಿಯೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರ ಒಟ್ಟು ಸಂಖ್ಯೆ 11.76 ಲಕ್ಷ ದಾಟಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಕೋವಿಡ್ ವೇಗವಾಗಿ ವ್ಯಾಪಿಸಿಕೊಳ್ಳುತ್ತಿರುವ ಪರಿಣಾಮ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ಸದ್ಯ 1.42 ಲಕ್ಷ ಸೋಂಕಿತರು ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್ ಸೋಂಕಿತರಲ್ಲಿ 7,098 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು. ಈವರೆಗೆ ಗುಣಮುಖರಾದವರ ಸಂಖ್ಯೆ 10.21 ಲಕ್ಷ ಮೀರಿದೆ.
Corona virus death increasing in Karnataka