250 ರೂ.ಗೆ ಮನೆಯಲ್ಲೇ ಕರೊನಾ ಪರೀಕ್ಷೆ ! ರಾಪಿಡ್ ಆ್ಯಂಟಿಜನ್ ಹೋಂ ಟೆಸ್ಟ್​ ಕಿಟ್ ಬಳಕೆ​ಗೆ ಹಸಿರು ನಿಶಾನೆ

home
Published on

ನವದೆಹಲಿ : ಉಲ್ಬಣವಾಗುತ್ತಿರುವ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಕರೊನಾ ಪರೀಕ್ಷೆ ನಡೆಸುವ ಲ್ಯಾಬರೇಟರಿಗಳ ಮೇಲೂ ಸಾಕಷ್ಟು ಒತ್ತಡವಿದೆ. ಇದನ್ನು ತಪ್ಪಿಸಲು ಇದೀಗ ಮನೆಯಲ್ಲೇ ಕರೊನಾ ಪರೀಕ್ಷೆ ನಡೆಸುವ ರಾಪಿಡ್​ ಆ್ಯಂಟಿಜನ್​ ಟೆಸ್ಟ್​ (ಆರ್​​ಎಟಿ)ಕಿಟ್​ಗಳ ಬಳಕೆಗೆ ಹಸಿರು ನಿಶಾನೆ ಸಿಕ್ಕಿದೆ. ಶೀಘ್ರವಾಗಿ ಫಲಿತಾಂಶ ನೀಡುವ ಈ ಟೆಸ್ಟ್​ನ ಬಳಕೆಯಿಂದ ಕರೊನಾ ಸೋಂಕಿತರಿಗೆ ಸಕಾಲಿಕ ಚಿಕಿತ್ಸೆ ದೊರೆಯಲು ಸಹಾಯವಾಗಲಿದೆ ಎನ್ನಲಾಗಿದೆ.

ಈ ಆರ್​ಎಟಿ ಕಿಟ್​ಗಳ ಬಳಕೆಯು ಮೊಬೈಲ್ ಆ್ಯಪ್​ ನಿಯಂತ್ರಿತವಾಗಿ ನಡೆಯಲಿದ್ದು, ಈ ಪರೀಕ್ಷೆಯನ್ನು ಯಾರು ಮತ್ತು ಹೇಗೆ ಮಾಡಬೇಕೆಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್​(ಐಸಿಎಂಆರ್) ವಿವರವಾದ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಕೇವಲ ರೋಗಲಕ್ಷಣಗಳು ಕಾಣಿಸಿಕೊಂಡಿರುವ ವ್ಯಕ್ತಿಗಳು ಮತ್ತು ಲ್ಯಾಬ್​ ಟೆಸ್ಟ್​ನಲ್ಲಿ ಪಾಸಿಟೀವ್ ಬಂದಿರುವವರ ನಿಕಟ ಸಂಪರ್ಕಕ್ಕೆ ಒಳಗಾಗಿರುವವರು ಈ ಹೋಮ್ ಟೆಸ್ಟ್​​ಅನ್ನು ತೆಗೆದುಕೊಳ್ಳಬೇಕು. ಯಾರೆಂದರೆ ಅವರು ಈ ಟೆಸ್ಟ್​ ಬಳಸಬಾರದು ಎಂದು ಐಸಿಎಂಆರ್​ ಹೇಳಿದೆ.

ಪುಣೆಯ ಮೈಲ್ಯಾಬ್​ ಡಿಸ್ಕವರಿ ಸಲ್ಯೂಷನ್ಸ್​​ ಲಿಮಿಟೆಡ್​ ಕಂಪೆನಿ ರೂಪಿಸಿರುವ ಕೋವಿಸೆಲ್ಫ್​​ಟಿಎಂ (ಪ್ಯಾಥೋಕ್ಯಾಚ್) ಕೋವಿಡ್-19 ಒಟಿಸಿ ಆ್ಯಂಟಿಜನ್ ಎಲ್​ಎಫ್​ ಡಿವೈಸ್​ ಎಂಬ ಉಪಕರಣವನ್ನು ಈ ಹೋಂ ಟೆಸ್ಟ್​ಗಾಗಿ ಐಸಿಎಂಆರ್​ ಅನುಮೋದಿಸಿದೆ. ಈ ಟೆಸ್ಟ್​ ಕಿಟ್​ನ ಬೆಲೆ 250 ರೂ.ಗಳಾಗಿವೆ ಎನ್ನಲಾಗಿದೆ.

ಇದನ್ನು ಬಳಸಿ ಮನೆಯಲ್ಲೇ ಪರೀಕ್ಷೆ ಒಳಪಡಲಿಚ್ಛಿಸುವವರು, ಗೂಗಲ್​ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಸ್ಟೋರ್​ಗಳಲ್ಲಿ ಲಭ್ಯವಿರುವ ಆ್ಯಪ್​ಅನ್ನು ಡೌನ್​ಲೋಡ್​ ಮಾಡಿಕೊಂಡು ಅದರಲ್ಲಿರುವ ವಿಧಾನದಂತೆ ಮೂಗಿನ ದ್ರವ ಪಡೆದು ಪರೀಕ್ಷೆ ಮಾಡಿಕೊಳ್ಳಬೇಕು. ಪಾಸಿಟೀವ್ ಅಥವಾ ನೆಗೆಟೀವ್ ಫಲಿತಾಂಶವನ್ನು ಪಡೆದ ನಂತರ ಟೆಸ್ಟ್​ ಸ್ಟ್ರಿಪ್​ನ ಫೋಟೋವನ್ನು ಅದೇ ಮೊಬೈಲ್ ಫೋನಿನಲ್ಲಿ ತೆಗೆಯಬೇಕು. ಇದರಿಂದ ಮುಂದಿನ ಕ್ರಮಕ್ಕಾಗಿ ವ್ಯಕ್ತಿಯ ಡೇಟಾ ಐಸಿಎಂಆರ್​ನ ಕೇಂದ್ರೀಯ ಕೋವಿಡ್-19 ಟೆಸ್ಟಿಂಗ್ ಪೋರ್ಟಲ್​ನಲ್ಲಿ ಸಂಗ್ರಹವಾಗುತ್ತದೆ ಎನ್ನಲಾಗಿದೆ.

"ಈ ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ ಅವರನ್ನು ಆರ್​ಟಿಪಿಸಿಆರ್​ ಟೆಸ್ಟ್​ನಲ್ಲಿ ಪಾಸಿಟಿವ್ ಬಂದವರಂತೆಯೇ ಪರಿಗಣಿಸಬೇಕು. ಮತ್ತೆ ಪರೀಕ್ಷೆ ಮಾಡುವ ಅಗತ್ಯವಿಲ್ಲ" ಎಂದಿರುವ ಐಸಿಎಂಆರ್​, "ಒಂದು ವೇಳೆ ಗುಣಲಕ್ಷಣಗಳಿದ್ದವರಿಗೆ ಆರ್​ಎಟಿಯಲ್ಲಿ ನೆಗೆಟೀವ್​ ಬಂದರೆ ತಕ್ಷಣ ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿಸಬೇಕು. ಏಕೆಂದರೆ ಕೆಲವೊಮ್ಮೆ ವೈರಲ್​ ಲೋಡ್​ ಕಡಿಮೆ ಇದ್ದಲ್ಲಿ ಆರ್​ಎಟಿಯಲ್ಲಿ ಪತ್ತೆಯಾಗುವುದಿಲ್ಲ" ಎಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net