

ರಾಯ್ಪುರ್: ಸಿಡಿಲ ಹೊಡೆತದಿಂದ ಗಾಯಗೊಂಡು ಪ್ರಜ್ಞೆ ಕಳೆದುಕೊಂಡಿದ್ದವನಿಗೆ ಪುನರುಜ್ಜೀವನ ನೀಡುವ ಪ್ರಯತ್ನದಲ್ಲಿ ಆತನನ್ನು ಸಗಣಿ ರಾಶಿಯಲ್ಲಿ ಅರ್ಧ ಸಮಾಧಿ ಮಾಡುವ ಮೂಲಕ ಕುಟುಂಬವೇ ಆತನ ಸಾವಿಗೆ ಕಾರಣವಾದ ದುರಂತ ಘಟನೆ ಛತ್ತೀಸ್ಗಢದ ಸರ್ಗುಜಾ ಜಿಲ್ಲೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಲಖನ್ಪುರ್ ಮಟ್ಕಿ ಎಂದು ಗುರುತಿಸಲಾಗಿದೆ. ತೌಕ್ತೆ ಚಂಡಮಾರುತ ಪರಿಣಾಮ ಸರ್ಗುಜಾ ಜಿಲ್ಲೆಯಾದ್ಯಂತ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗುತ್ತಿದೆ. ನಿನ್ನೆ ಮಟ್ಕಿ, ತನ್ನ ಮನೆಯ ಮುಂದೆ ನಿಂತಿದ್ದಾಗ ಸಿಡಿಲು ಹೊಡೆತದಿಂದ ಗಂಭೀರ ಗಾಯಗೊಂಡು ಪ್ರಜ್ಞೆ ಕಳೆದುಕೊಂಡಿದ್ದ.
ಇದನ್ನು ನೋಡಿದ ಆತನ ಕುಟುಂಬ ಆಸ್ಪತ್ರೆಗೆ ಕರೆದೊಯ್ಯದೆ, ಸಗಣಿ ರಾಶಿಯಲ್ಲಿ ಆತನನ್ನು ಹೂತು, ತಲೆಯ ಭಾಗವನ್ನು ಮಾತ್ರ ಬಿಟ್ಟು ಅರ್ಧ ಸಮಾಧಿ ಮಾಡಿದ್ದರು. ಸಿಡಿಲ ಬಡಿತದಿಂದ ಸತ್ತ ವ್ಯಕ್ತಿಯನ್ನು ಸಗಣಿ ಗುಂಡಿಯಲ್ಲಿ ಸಮಾಧಿ ಮಾಡಿದರೆ ಮತ್ತೆ ಬದುಕಿ ಬರುತ್ತಾನೆಂಬ ಮೂಡನಂಬಿಕೆಗೆ ಕಟ್ಟುಬಿದ್ದು ಇದೀಗ ಮನೆಯ ಸದಸ್ಯನನ್ನೇ ಕುಟುಂಬ ಕಳೆದುಕೊಂಡಿದೆ.
ಸಗಣಿ ಗುಂಡಿಯ ಪ್ರಯತ್ನ ಮಾಡಿದಾಗಲೂ ಆತ ಎಚ್ಚರಗೊಳ್ಳದಿದ್ದಾಗ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. (ಏಜೆನ್ಸೀಸ್)