ಕರೊನಾ ಕಾರ್ಯಪಡೆ ಅಧ್ಯಕ್ಷರೇ ಬದಲಾದ್ರು; ಸಿಎಂ ಯಡಿಯೂರಪ್ಪ ಅವರಿಂದ ಟಾಸ್ಕ್​ಫೋರ್ಸ್ ಪುನರ್ ರಚನೆ

Task force
Published on

ಬೆಂಗಳೂರು: ಒಂದೆಡೆ ಕರೊನಾ ಪರಿಸ್ಥಿತಿ ಕಗ್ಗಂಟಾಗುತ್ತಿದ್ದು, ಸೋಂಕಿತರ ಸಂಖ್ಯೆಯ ಜತೆಗೆ ಸೋಂಕಿಗೆ ಒಳಗಾಗಿ ಸಾಯುತ್ತಿರುವವರ ಸಂಖ್ಯೆಯೂ ಹೆಚ್ಚಳವಾಗುತ್ತಿದ್ದರೆ, ಇನ್ನೊಂದೆಡೆ ಕರೊನಾ ಕಾರ್ಯಪಡೆ ಅಧ್ಯಕ್ಷರೇ ಬದಲಾಗಿದ್ದಾರೆ. ಹೇಗಾದರೂ ಕರೊನಾ ಪರಿಸ್ಥಿತಿಯನ್ನು ತಹಬದಿಗೆ ತರಬೇಕು ಎಂದು ಪ್ರಯತ್ನಿಸುತ್ತಿರುವ ಸಿಎಂ ಯಡಿಯೂರಪ್ಪ ಇಂದು ಕರೊನಾ ಕಾರ್ಯಪಡೆಯನ್ನು ಪುನರ್ ರಚಿಸಿದ್ದಾರೆ.

ಕರೊನಾ ಸೋಂಕು ನಿಯಂತ್ರಣ ಕ್ರಮಗಳ ಪರಾಮರ್ಶೆಗಾಗಿ‌ ಕಾರ್ಯಪಡೆಯನ್ನು ಪುನರ್ ರಚಿಸಿರುವ ಸಿಎಂ ಯಡಿಯೂರಪ್ಪ, ಕಾರ್ಯಪಡೆಯ ಈ ಹಿಂದಿನ ಅಧ್ಯಕ್ಷರನ್ನು ತೆರವುಗೊಳಿಸಿ ನೂತನ ಅಧ್ಯಕ್ಷರನ್ನಾಗಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ನೇಮಿಸಿದ್ದಾರೆ. ಸಚಿವರಾದ ಎಸ್. ಸುರೇಶ್ ಕುಮಾರ್, ಸಿ.ಸಿ. ಪಾಟೀಲ್ ಹಾಗೂ ಡಾ.ಕೆ. ಸುಧಾಕರ್ ಈ ಕಾರ್ಯಪಡೆ ಸದಸ್ಯರಾಗಿದ್ದಾರೆ.

ಕಾರ್ಯಪಡೆಗೆ ಅಗತ್ಯವಾದ ಮಾಹಿತಿ ನೀಡುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಸಿಎಂ ಯಡಿಯೂರಪ್ಪ ಒಪ್ಪಿಸಿದ್ದಾರೆ. ಕರೊನಾ ಕಾರ್ಯಪಡೆಗೆ ಇದುವರೆಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಅಧ್ಯಕ್ಷರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net