ತುಂಬಾ ಆಸೆಯಿಂದ ಬಂದವ ಆಸ್ಪತ್ರೆ ಸೇರಿದ, ಮದುವೆ ಮನೆಯಲ್ಲೀಗ ಟೆನ್ಶನ್

wedding
Published on

ಯಾದಗಿರಿ: ಹಸೆಮಣೆ ಏರಲೆಂದು ನೂರಾರು ಕನಸಿನೊಂದಿಗೆ ಬೆಂಗಳೂರಿಂದ ಸ್ವಗ್ರಾಮಕ್ಕೆ ಬಂದಿದ್ದ ವರನಿಗೂ ಕೋವಿಡ್​ ಸೋಂಕು ತಗುಲಿದೆ. ಮದುವೆ ಸಂಭ್ರಮದಲ್ಲಿ ಮಿಂದೇಳಬೇಕಿದ್ದ ಯುವಕನೀಗ ಕೋವಿಡ್​ ಆಸ್ಪತ್ರೆ ಸೇರಿದ್ದಾನೆ.

ಇದುವರೆಗೂ ಮಹಾರಾಷ್ಟ್ರದ ಕಂಟಕ ಅನುಭವಿಸುತ್ತಿದ್ದ ಯಾದಗಿರಿಗೆ ರಾಜ್ಯರಾಜಧಾನಿಯ ಕಂಟಕ ಎದುರಾಗಿದೆ. ಶಹಾಪುರ ತಾಲೂಕಿನ ಹಳ್ಳಿಯೊಂದರ ಯುವಕನಿಗೆ ಕರೊನಾ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿದ್ದ ಆತ ತನ್ನ ಮದುವೆ ಸಲುವಾಗಿ ಜಿಲ್ಲೆಗೆ ಬಂದಿದ್ದ. ಇದನ್ನೂ ಓದಿರಿ video/ ಈ ಊರಿಗೆ ನೀವು ಕಾಲಿಟ್ರೆ 10 ಸಾವಿರ ರೂ. ದಂಡ ಫಿಕ್ಸ್!

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇನ್ನೈದು ದಿನದಲ್ಲಿ ಆತ ದಾಂಪತ್ಯಕ್ಕೆ ಕಾಲಿಡಬೇಕಿತ್ತು. ಕರೊನಾ ಪಾಸಿಟಿವ್ ಬಂದ ಯುವಕನ ಮದುವೆ ಇದೇ ತಿಂಗಳ 13ಕ್ಕೆ ಫಿಕ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಜೂನ್ 29ರಂದು ಯುವಕ ಬೆಂಗಳೂರಿನಿಂದ ಯಾದಗಿರಿಗೆ ಬಂದಿದ್ದ. ಆ ವೇಳೆಯೇ ಆತ ಅನಾರೋಗ್ಯಕ್ಕೀಡಾಗಿದ್ದ ಎನ್ನಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಯುವಕನಿಗೆ ಕರೊನಾ ಪರೀಕ್ಷೆ ಮಾಡಿಸಲಾಗಿದ್ದು, ವರದಿ ಪಾಸಿಟಿವ್ ಬಂದಿದೆ.

ಇದಕ್ಕೂ ಮುನ್ನ ಮದುವೆ ಕೆಲಸದ ಸಲುವಾಗಿ ಯುವಕ ಓಡಾಡಿದ್ದು, ಕುಟುಂಬಸ್ಥರು ಮತ್ತು ಗ್ರಾಮಸ್ಥರಲ್ಲಿ ಸೋಂಕಿನ ಭೀತಿ ಆವರಿಸಿದೆ. ಸದ್ಯ ಮದುವೆಯನ್ನು ಮುಂದೂಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net