ಬಿಎಸ್​ವೈಗೆ ಕರೊನಾ ದೃಢಪಟ್ಟಿದ್ದರೂ ಎಂದಿನಂತೆ ಕಾರ್ಯನಿರ್ವಹಿಸಿದ ಸಿಎಂ ಕಚೇರಿ

Vidhan Soudha vvani
Published on

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರಿಗೆ ಕರೊನಾ ಪಾಸಿಟಿವ್​ ದೃಢಪಟ್ಟಿದ್ದರೂ ವಿಧಾನಸೌಧದಲ್ಲಿರುವ ಸಿಎಂ ಕಚೇರಿಗಳು ಸೋಮವಾರ ಎಂದಿನಂತೆ ಕಾರ್ಯನಿರ್ವಹಿಸಿದವು.

ಸಿಎಂ ಕಚೇರಿಗೆ ಹೊಂದಿಕೊಂಡಂತಿರುವ ಕಚೇರಿಗಳನ್ನು ಸೀಲ್ಡೌನ್​ ಮಾಡಿರಲಿಲ್ಲ. ಸಿಎಂ ಸಚಿವಾಲಯದ ಹಿರಿಯ ಅಧಿಕಾರಿಗಳಿಗೆ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಲಾಗಿದ್ದು, ಅವರ ನಿಕಟಸಂಪರ್ಕಕ್ಕೆ ಬಂದವರಿಗೆ ಮೊದಲು ಪರೀಕ್ಷೆ ಮಾಡಿಸಲಾಗಿದೆ.

ಕರೊನಾ ದೃಢಪಡುತ್ತಿದ್ದಂತೆ ನಿನ್ನೆ(ಭಾನುವಾರ) ರಾತ್ರಿಯೇ ಸಿಎಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಎಂ ಕುಟುಂಬಸ್ಥರು ಹೋಂ ಕ್ವಾರಂಟೈನ್​ನಲ್ಲಿದ್ದು, ಅವರ ಪುತ್ರಿ ಪದ್ಮಾವತಿಗೆ ಸೋಂಕು ತಗುಲಿರುವ ಕಾರಣ ಅಪ್ಪ-ಮಗಳು ಮಣಿಪಾಲ್​ ಆಸ್ಪತ್ರೆಯ ಒಂದೇ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾವೇರಿ-ಕೃಷ್ಣಾ ನಿವಾಸದ ಸಿಬ್ಬಂದಿಗಳಿಗೂ ಕರೊನಾ ಟೆಸ್ಟ್ ಮಾಡಿಸಲಾಗಿದ್ದು, ಒಟ್ಟಾರೆ 11 ಮಂದಿಗೆ ಸೋಂಕು ಇರುವುದು ಗೊತ್ತಾಗಿದೆ.

ಈ ನಡುವೆ ಸಿಎಂ ಸಚಿವಾಲಯ ಸಿಬ್ಬಂದಿ ಸೋಮವಾರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿ ತಮ್ಮ ಪಾಡಿಗೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಸಿಎಂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್​, ಆಪ್ತ ಕಾರ್ಯದರ್ಶಿ ರಾಚಪ್ಪ ಸೇರಿ ಹಿರಿಯ ಅಧಿಕಾರಿಗಳ ಕಚೇರಿಗಳು ತೆರೆದಿದ್ದವು. ಕರೊನಾ ಲಕ್ಷಣಗಳು ಕಂಡು ಬಂದಿರುವ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಾಕೀತು ಮಾಡಲಾಗಿದೆ. ಸಿಎಂ ಸಂಪರ್ಕಕ್ಕೆ ಬಂದಿರುವ ಅಧಿಕಾರಿಗಳ ಕರೋನಾ ಪರೀಕ್ಷೆ ವರದಿ ಬಂದ ಮೇಲೆ ಯಾವ್ಯಾವ ಅಧಿಕಾರಿಗಳು ಕ್ವಾರಂಟೈನ್​ ಆಗಲಿದ್ದಾರೆ ಎನ್ನುವುದು ತಿಳಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net