

ಕೋಲಾರ: ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದ್ದು, ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಅತ್ತಿಗಿರಿಕುಪ್ಪದ ಅನಾಥಾಶ್ರಮಕ್ಕೂ ಕೋವಿಡ್ ಕಾಡುತ್ತಿದೆ.
ಬಜೇರಿಯಾ ಟ್ರಸ್ಟ್ ನಡೆಸುತ್ತಿರುವ ಅನಾಥಾಶ್ರಮದಲ್ಲಿ 60ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಈ ಪೈಕಿ 27 ಮಕ್ಕಳಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಆಶ್ರಮದಲ್ಲಿ ಓರ್ವ ವಿದ್ಯಾರ್ಥಿನಿಗೆ ಜ್ವರ- ಕೆಮ್ಮು ಕಾಣಿಸಿಕೊಂಡಿದ್ದರಿಂದ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಎಲ್ಲ ಮಕ್ಕಳಿಗೂ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಇಂದು ಬಂದ ವರದಿಯಲ್ಲಿ 26 ಮಕ್ಕಳಿಗೆ ಸೋಂಕು ಇರುವುದು ಗೊತ್ತಾಗಿದೆ. ಒಟ್ಟು 27 ಮಕ್ಕಳನ್ನೂ ಕೋಲಾರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಶ್ರಮವನ್ನು ಕಂಟೋನ್ಮೆಂಟ್ ಮಾಡಲಾಗಿದೆ.