

ಉಡುಪಿ: ಮದುವೆ ಮನೆಗಳೇ ಇದೀಗ ಕರೊನಾ ಸೋಂಕು ಹರಡುವಿಕೆಯ ಕೇಂದ್ರಗಳಾಗಿ ಮಾರ್ಪಡುತ್ತಿವೆ. ಕೋವಿಡ್ ನಿಯಮ ಉಲ್ಲಂಘಿಸಿ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡವರ ಬದುಕಲ್ಲಿ ಈಗಾಗಲೇ ಸಾವು-ನೋವು ಸಂಭವಿಸಿದೆ.
ಸಪ್ತಪದಿ ತುಳಿದ ಕೆಲ ಗಂಟೆಯಲ್ಲೇ ಮದುಮಗ ಆಸ್ಪತ್ರೆಗೆ ಸೇರಿದ್ದು, ಬೆಳಗ್ಗೆ ನಡೆಯಬೇಕಿದ್ದ ಮದುವೆ ರಾತ್ರೋರಾತ್ರಿ ರದ್ದು, ನೂರಾರು ಜನರ ಜೀವಕ್ಕೆ ಕುತ್ತು ತಂದ ಅದ್ದೂರಿ ಮದುವೆ, ವರನ ತಾಯಿಗೆ ಸೋಂಕು, ಮದುವೆ ಮನೆಗೆ ದೌಡಾಯಿಸಿದ ಆರೋಗ್ಯ ಅಧಿಕಾರಿಗಳು-ವಧು-ವರ ಒಂದಾಗುವ ಕ್ಷಣಕ್ಕೆ ಭಂಗ... ಇಂತಹ ನೂರಾರು ಸುದ್ದಿಗಳನ್ನು ಈಗಾಗಲೇ ಕೇಳಿದ್ದೇವೆ. ಇದೆಲ್ಲವೂ ಕರೊನಾ ಎಫೆಕ್ಟ್. ಇದೀಗ ಇಂತಹದ್ದೇ ಮತ್ತೊಂದು ಆಘಾತಕಾರಿ ಅಂಶ ಹೊರಬಿದ್ದಿದೆ. ಮದುವೆ ಮನೆಯ ಮೆಹಂದಿ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದ ಮೂವರು ಮಕ್ಕಳು ಸೇರಿ 7 ಜನರಿಗೆ ಕರೊನಾ ಪಾಸಿಟಿವ್ ಬಂದಿದೆ.
ಇದನ್ನೂ ಓದಿರಿ ಅದ್ದೂರಿ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ಬ್ರೇಕ್
ಕಾಪು ತಾಲೂಕು ಮಲ್ಲಾರಿನ ಕೊಂಬಗುಡ್ಡೆಯ ಯುವತಿ ಮದುವೆ ಶಿವಮೊಗ್ಗ ಜಿಲ್ಲೆ ಹೊಸನಗರ ಯುವಕನೊಂದಿಗೆ ಜೂ.25ರಂದು ನೆರವೇರಿತ್ತು. ಹೊಸನಗರದಲ್ಲಿ ನಡೆದ ಮದುವೆಯಲ್ಲಿ ನೂರಾರು ಜನ ಪಾಲ್ಗೊಂಡಿದ್ದರು. ಮೆಹಂದಿ ಶಾಸ್ತ್ರದಲ್ಲಿ 80ಕ್ಕೂ ಜನ ಭಾಗಿಯಾಗಿದ್ದರು.
ಮದುವೆ ಸಡಗರದಲ್ಲಿ ಮಿಂದೆದ್ದ ಎರಡೂ ಕುಟುಂಬದ ಖುಷಿ ಕೇವಲ 10 ದಿನಕ್ಕಷ್ಟೇ ಸೀಮಿತವಾಗಿದೆ. ಏಕೆಂದರೆ ಜು.6ರಂದು ವಧುಗೆ ಕರೊನಾ ಸೋಂಕು ಇರುವುದು ಗೊತ್ತಾಗಿದ್ದು, ಕುಟುಂಬಸ್ಥರಲ್ಲಿ ಸೋಂಕಿನ ಭೀತಿ ಆವರಿಸಿದೆ.
ಮೆಹಂದಿ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದ ಕೆಲವರನ್ನು ಕರೊನಾ ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ ಮೂವರು ಮಕ್ಕಳು, ಮೂವರು ಮಹಿಳೆಯರು, ಒಬ್ಬ ಪುರುಷನಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಇನ್ನೂ ಮೂವರ ವರದಿ ಬರಬೇಕಿದೆ.