

ಶಿವಮೊಗ್ಗ: ಕರೊನಾ ಸೋಂಕಿತ ವೃದ್ಧರೊಬ್ಬರು ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರೋ ಅಥವಾ ಮೃತಪಟ್ಟ ನಂತರ ಸಂಬಂಧಿಕರಿಗೆ ಮಾಹಿತಿ ನೀಡದೆ ಅಂತ್ಯಕ್ರಿಯೆ ನಡೆಸಲಾಗಿದೆಯೋ ಎಂಬ ಪ್ರಶ್ನೆ ಎದುರಾಗಿದ್ದು, ಪ್ರಕರಣ ಇದೀಗ ದೊಡ್ಡಪೇಟೆ ಠಾಣೆ ಮೆಟ್ಟಿಲೇರಿದೆ.
ಶಿಕಾರಿಪುರದ 85 ವರ್ಷದ ವೃದ್ಧರೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಅವರು ಜು.18ರಂದು ತಾಲೂಕು ಆಸ್ಪತ್ರೆಗೆ ಹೋಗಿದ್ದರು. ವೈದ್ಯರು ಕರೊನಾ ಪರೀಕ್ಷೆ ನಡೆಸಬೇಕೆಂದು 2 ದಿನ ಆಸ್ಪತ್ರೆಯಲ್ಲೇ ದಾಖಲಿಸಿಕೊಂಡಿದ್ದರು. ಕುಟುಂಬಸ್ಥರು ಮನೆಗೆ ಕಳಿಸಿಕೊಡಿ ಎಂದು ಮನವಿ ಮಾಡಿದ್ದರು. ಆದರೆ, ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಯಲ್ಲಿ ವೃದ್ಧನಿಗೆ ಕರೊನಾ ಪಾಸಿಟಿವ್ ಬಂದಿತ್ತು. ಅವರ ಮನೆಯವರಿಗೆ ತಿಳಿಸದೆ ವೃದ್ಧನನ್ನು ಜು.22ರಂದು ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಜು.23ರಂದು ವಿಷಯ ತಿಳಿದ ಮನೆಯವರು ಮೆಗ್ಗಾನ್ ಆಸ್ಪತ್ರೆ ಮತ್ತು ಕರೊನಾ ಕೇರ್ ಸೆಂಟರ್ಗಳಲ್ಲಿ ಹುಡುಕಾಡಿದರೂ ವೃದ್ಧ ಪತ್ತೆಯಾಗಿರಲಿಲ್ಲ. ವಿಚಿತ್ರವೆಂದರೆ ಆಸ್ಪತ್ರೆಯಲ್ಲಿ ವೃದ್ಧನನ್ನು ದಾಖಲಿಸಿದ ಬಗ್ಗೆ ಯಾವುದೇ ದಾಖಲೆಗಳೂ ಇಲ್ಲ. ಶಿಕಾರಿಪುರಕ್ಕೆ ತೆರಳಿ ಆರೋಗ್ಯಾಧಿಕಾರಿಗಳನ್ನು ವಿಚಾರಿಸಿದಾಗ ವೃದ್ಧ ಮೃತಪಟ್ಟು 4 ದಿನ ಆಗಿದೆ. ಅಂತ್ಯಕ್ರಿಯೆ ಕೂಡ ನಡೆಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ಬಳಿಕ ಶಿಕಾರಿಪುರಕ್ಕೆ ತೆರಳಿ ಸಭೆ ನಡೆಸಿದ್ದ ಡಿಎಚ್ಒ ರಾಜೇಶ್ ಸುರಗೀಹಳ್ಳಿ, ವೃದ್ಧ ಸಾವನ್ನಪ್ಪಿಲ್ಲ, ನಾಪತ್ತೆಯಾಗಿದ್ದು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಇದು ಕುಟುಂಬಸ್ಥರಲ್ಲಿ ಗೊಂದಲ ಸೃಷ್ಟಿಸಿದೆ.
4 ದಿನದ ಹಿಂದೆಯೇ ಅಂತ್ಯಕ್ರಿಯೆ?: ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ವೃದ್ಧ ಮೃತಪಟ್ಟಿದ್ದು ರಾಜೀವ್ಗಾಂಧಿ ಬಡಾವಣೆಯ ರೋಟರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ವೃದ್ಧನ ಸಂಬಂಧಿಕರ ಬಗ್ಗೆ ಸಿಬ್ಬಂದಿ ಪೂರ್ವಾಪರ ಆಲೋಚಿಸದೆ ಅಂತ್ಯಕ್ರಿಯೆ ನಡೆಸಲು ಶವ ಕಳಿಸಿದ್ದಾರೆ. ವೃದ್ಧನ ಬಳಿ ಮೊಬೈಲ್ ಇಲ್ಲದಿರುವುದು ಹಾಗೂ ಕಿವಿ ಕೇಳದಿರುವುದೇ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ವೃದ್ಧನ ಬಗ್ಗೆ ಕುಟುಂಬಸ್ಥರು ವಿಚಾರಿಸಿಕೊಂಡು ಮೆಗ್ಗಾನ್ಗೆ ಬಂದಾಗ ಎಚ್ಚೆತ್ತುಕೊಂಡಿರುವ ಸಿಮ್ಸ್ ನಿರ್ದೇಶಕರು, ವೃದ್ಧ ನಾಪತ್ತೆಯಾಗಿದ್ದಾರೆಂದು ಠಾಣೆಗೆ ದೂರು ನೀಡಿರುವುದು ಮತ್ತಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, 'ಶಿಕಾರಿಪುರ ತಾಲೂಕಿನ ಕರೊನಾ ಸೋಂಕಿತ ವೃದ್ಧರೊಬ್ಬರು ಮೆಗ್ಗಾನ್ ಆಸ್ಪತ್ರೆಯಿಂದ ನಾಪತ್ತೆಯಾಗಿರುವ ಬಗ್ಗೆ ಆಸ್ಪತ್ರೆ ನಿರ್ದೇಶಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಬಳಿಕ ವಾಸ್ತವ ತಿಳಿಯಬೇಕಿದೆ. ವೃದ್ಧ ಮೆಗ್ಗಾನ್ಗೆ ಬಂದಿರುವುದಕ್ಕೆ ಆಸ್ಪತ್ರೆಯಲ್ಲಿ ದಾಖಲೆ ಇದೆ. ಎಲ್ಲಿ ಲೋಪವಾಗಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕು' ಎಂದಿದ್ದಾರೆ.