ಪ್ರತಿದಿನ ಹೊಸ ದಾಖಲೆ: ಶುಕ್ರವಾರ 57 ಸಾವಿರ ಗಡಿ ದಾಟಿದ ಹೊಸ ಪ್ರಕರಣ

corona symptom
Published on

ನವದೆಹಲಿ: ದೇಶದಲ್ಲಿ ಶುಕ್ರವಾರ ಒಂದೇ ದಿನ 57 ಸಾವಿರ ಪ್ರಕರಣಗಳು ವರದಿಯಾಗಿದೆ. ಈವರೆಗೆ ವರದಿಯಾದ ಅತ್ಯಧಿಕ ಸಂಖ್ಯೆ ಯಾಗಿದೆ. ಇದಕ್ಕೂ ಮುಂಚೆ ಮೂರು ಬಾರಿ ಹೊಸ ಪ್ರಕರಣಗಳು 50 ಸಾವಿರದ ಗಡಿ ದಾಟಿದ್ದವು. ಕಳೆದ 24 ತಾಸಿನಲ್ಲಿ 32 ಸಾವಿರಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 17.29 ಲಕ್ಷಕ್ಕೇರಿದೆ. ಹೊಸದಾಗಿ 300 ಮಂದಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 36,800ಕ್ಕಿಂತ ಅಧಿಕವಾಗಿದೆ. ಈವರೆಗೆ 11.26 ಲಕ್ಷ ರೋಗಿಗಳು ಗುಣಮುಖರಾಗಿದ್ದು, ಇನ್ನೂ 5.65 ಲಕ್ಷ ಸಕ್ರಿಯ ಪ್ರಕರಣಗಳಿವೆ.

* ಕರೊನಾ ವೈರಸ್ ಪಸರಿಸುವಿಕೆ ತಡೆಗಟ್ಟಲು ಎಲ್ಲ ರಾಜ್ಯಗಳು ದೆಹಲಿ ಅನುಸರಿಸಿದ ಮಾದರಿ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಸಲಹೆ ನೀಡಿದ್ದಾರೆ. * ಕರೊನಾ ತಡೆಗಟ್ಟಲು ಹಾಗೂ ರೋಗಿಗಳಿಗೆ ಚಿಕಿತ್ಸೆ ನೀಡಲು ಅಹಮದಾಬಾದ್ ಆಡಳಿತ ಅಳವಡಿಸಿಕೊಂಡಿರುವ ಕ್ರಮಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಪ್ರಶಂಸೆ ವ್ಯಕ್ತಪಡಿಸಿದೆ. * ಚೀನಾ ಮತ್ತು ರಷ್ಯಾ ಅಭಿವೃದ್ಧಿಪಡಿಸುತ್ತಿರುವ ಕರೊನಾ ವಿರುದ್ಧದ ಲಸಿಕೆಯನ್ನು ಸುರಕ್ಷತೆ ದೃಷ್ಟಿಯಿಂದ ಬಳಸುವ ಸಾಧ್ಯತೆ ಇಲ್ಲ ಎಂದು ಅಮೆರಿಕದ ಸಾಂಕ್ರಾಮಿಕ ರೋಗ ತಜ್ಞ ಆಂಥೋನಿ ಫೌಸಿ ಅಭಿಪ್ರಾಯಪಟ್ಟಿದ್ದಾರೆ.

ಆರಂಭದಲ್ಲಿ ಕರೊನಾವನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಕೇರಳದಲ್ಲಿ ಕಳೆದ 24 ತಾಸಿನಲ್ಲಿ 1,100 ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 24 ಸಾವಿರಕ್ಕೂ ಅಧಿಕವಾಗಿದೆ. ಈವರೆಗೆ 82 ಮಂದಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದಲ್ಲೂ ಕಳೆದೊಂದು ವಾರದಿಂದ ಪ್ರತಿದಿನ ಸರಾಸರಿ 10 ಸಾವಿರ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅಲ್ಲಿ ಈವರೆಗೆ 1400ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 1.50 ಲಕ್ಷಕ್ಕಿಂತ ಅಧಿಕವಾಗಿದೆ. ದೇಶದಲ್ಲಿ ಕರೊನಾದಿಂದ ತತ್ತರಿಸಿರುವ ಪ್ರಮುಖ ರಾಜ್ಯಗಳ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿ ಮಹಾರಾಷ್ಟ್ರ ಮತ್ತು ತಮಿಳುನಾಡು ಇದ್ದು, ಮೂರನೇ ಸ್ಥಾನದಲ್ಲಿ ಆಂಧ್ರಪ್ರದೇಶವಿದೆ. ದೆಹಲಿಯಲ್ಲಿ ತೀವ್ರ ಸ್ವರೂಪಕ್ಕೆ ತಿರುಗಿದ್ದ ಕರೊನಾವನ್ನು ಹೆಚ್ಚುವರಿ ಕ್ರಮ ಕೈಗೊಂಡ ಕಾರಣ ಪ್ರತಿದಿನದ ಪ್ರಕರಣಗಳ ಸರಾಸರಿ ಪ್ರಮಾಣ 1 ಸಾವಿರಕ್ಕೆ ಇಳಿಕೆಯಾಗಿದೆ. ಜಾಗತಿಕವಾಗಿಯೂ ಕರೊನಾ ಆರ್ಭಟ ಮುಂದುವರೆದಿದ್ದು, ಈವರೆಗೆ 6.84 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಸೋಂಕಿತರ ಸಂಖ್ಯೆ 1.78 ಕೋಟಿಗೆ ಏರಿಕೆಯಾಗಿದೆ.

ವೈದ್ಯಕೀಯ ಸಿಬ್ಬಂದಿ ರಕ್ಷಣೆಗಾಗಿ ಕವಚ

ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿಗೂ ಸೋಂಕು ತಗುಲುವಿಕೆ ಹೆಚ್ಚಿರುವುದರಿಂದ, ಮುಂಬೈನ ಜೆ.ಜೆ ಆಸ್ಪತ್ರೆ ‘ಕವಚ‘ ಎಂಬ ಸಾಧನವನ್ನು ಅಭಿವೃದ್ಧಿಪಡಿಸಿದೆ. ಇಂಡೋಮೆಡ್ ಡಿವೈಸಸ್ ಎಂಬ ಸಂಸ್ಥೆಯ ಇಂಜಿನಿಯರ್​ಗಳ ಸಹಯೋಗದೊಂದಿಗೆ ಇದನ್ನು ಅಭಿವೃದ್ಧಿಪಡಿಸಲಾಗಿದ್ದು, ಇದರಿಂದ ವೈದಕೀಯ ಸಿಬ್ಬಂದಿ ಸೋಂಕಿತರ ಸಂಪರ್ಕಕ್ಕೆ ಹೋಗುವುದನ್ನು ತಪ್ಪಿಸಬಹುದು. ಗಾಜಿನಿಂದ ತಯಾರಿಸಿದ ಟ್ರಾಲಿಯಂತಹ ಈ ಸಾಧನದ ಹೆಡ್ ತುದಿಯಲ್ಲಿ ಹೆಚ್​ಪಿಎ ಫಿಲ್ಟರ್ ಅಳವಡಿಸಲಾಗಿದ್ದು, ಇದು 0.02 ಮೈಕ್ರಾನ್​ಗಳಷ್ಟು ಸಣ್ಣ ಕಣಗಳನ್ನೂ ಸಹ ಶುದ್ಧೀಕರಿಸುತ್ತದೆ. ಇದರಿಂದಾಗಿ ಸೋಂಕಿತರನ್ನು ಕರೆದೊಯ್ಯುವಾಗ ಅವರಿಂದ ವೈರಸ್ ಹರಡುವ ಭೀತಿ ಕಡಿಮೆಯಾಗುತ್ತದೆ ಎಂದು ಜೆ ಜೆ ಆಸ್ಪತ್ರೆ ತಿಳಿಸಿದೆ.

ಮಂತ್ರ, ಪೂಜೆ ಮೊರೆ ಹೋದ ಗೋವಾ

ಕರೊನಾ ವೈರಸ್ ಪಸರಿಸುವಿಕೆ ತಡೆಗಟ್ಟುವ ಸಲುವಾಗಿ ಗೋವಾದ ಹಲವು ಭಾಗಗಳಲ್ಲಿನ ಜನರು ದೇವರ ಮೊರೆ ಹೋಗಿದ್ದು, ಮಹಾಮೃತ್ಯುಂಜಯ ಮಂತ್ರ ಪಠಣ, ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ ಮಾಡುತ್ತಿದ್ದಾರೆ. ಕಳೆದ ಮೇ 1ರಂದು ಕರೊನಾ ಮುಕ್ತ ಎಂದು ಘೊಷಿಸಲ್ಪಟ್ಟಿದ್ದ ಗೋವಾದಲ್ಲಿ ಬಳಿಕ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 5,900ಕ್ಕಿಂತ ಅಧಿಕವಾಗಿದೆ. ಹೀಗಾಗಿ ಕರೊನಾ ತಡೆಗಟ್ಟಲು ಗೋವಾದಾದ್ಯಂತದ ದೇವಾಲಯಗಳಲ್ಲಿ ಮಹಾಮೃತ್ಯುಂಜಯ ಮಂತ್ರದ ಜಪ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net